ಹಾವೇರಿ : ಬಹುತೇಕ ರೈತರು ಹಿಂಗಾರು ಬಿತ್ತನೆಯಲ್ಲಿ ನಿರತರಾಗಿದ್ದಾರೆ. ಕೆಲ ರೈತರು ಹಿಂಗಾರು ಬಿತ್ತನೆ ಮುಗಿಸಿದ್ದು, ತಾವು ಸಾಕಿದ್ದ ಎತ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ರೈತರ ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿವೆ.
ಆದರೆ, ರೈತರ ಎತ್ತುಗಳನ್ನು ಕೊಳ್ಳುವವರು ಯಾರೂ ಇಲ್ಲ. ಮುಂಗಾರು ಹಂಗಾಮಿನ ವೇಳೆ ಲಕ್ಷಾಂತರ ರೂಪಾಯಿ ಹಣ ನೀಡಿ ಖರೀದಿ ಮಾಡಿದ್ದ ಎತ್ತುಗಳನ್ನು ಇದೀಗ 50 ಸಾವಿರ 70 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಧಾನ್ಯ ಮತ್ತು ಜಾನುವಾರುಗಳಿಗೆ ಮೇವಾಗಲು ರೈತರು ಶೇಂಗಾ, ಸೋಯಾಬಿನ್ ಮತ್ತು ಮೆಕ್ಕೆಜೋಳ ಬೆಳೆದಿದ್ದರು. ಆದರೆ, ಅಧಿಕ ಮಳೆಯಿಂದ ಶೇಂಗಾ, ಸೋಯಾಬಿನ್ ಮತ್ತು ಮೆಕ್ಕೆಜೋಳದ ಸೊಪ್ಪು ಕೊಳೆತುಹೋಗಿದ್ದು, ಜಾನುವಾರುಗಳಿಗೆ ಹಾಕಲು ಮೇವಿಲ್ಲದಿರುವುದರಿಂದಾಗಿ ರೈತರು ಜಾನುವಾರು ಮಾರಾಟಕ್ಕೆ ಮುಂದಾಗಿದ್ದಾರೆ.
ಜಾನುವಾರುಗಳಿಗೆ ಮೇವಿಲ್ಲ, ರೈತರ ಕೈಯಲ್ಲಿ ಹಣ ಇಲ್ಲ. ಈ ಹಿನ್ನೆಲೆಯಲ್ಲಿ ರೈತರು ಜಾನುವಾರು ಮಾರಾಟಕ್ಕೆ ಮುಂದಾಗಿದ್ದಾರೆ. ಜೀವನ ಮಾಡುವುದು ಕಷ್ಟವಾಗಿದೆ. ಇದ್ದ ಜಾನುವಾರು ಮಾರಾಟ ಮಾಡಿ ಮುಂದಿನ ಮುಂಗಾರಿನವರೆಗೆ ಕಾಯಬೇಕು. ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ, ಕಡಲೆ ಶೇಂಗಾ ಉತ್ತಮವಾಗಿ ಬಂದರೆ ಜಾನುವಾರುಗಳಿಗೆ ಮೇವಾಗುತ್ತದೆ. ಆದರೆ, ಅಲ್ಲಿಯವರೆಗೆ ಜಾನುವಾರುಗಳಿಗೆ ಹಾಕಲು ಮೇವಿಲ್ಲ, ಭತ್ತದ ಹುಲ್ಲು ಖರೀದಿಸಲು ನಮ್ಮ ಹತ್ರ ಹಣವಿಲ್ಲ, ಅದಕ್ಕಾಗಿ ಜಾನುವಾರು ಮಾರಾಟ ಮಾಡಲು ಮುಂದಾಗಿದ್ದೇವೆ ಎನ್ನುತ್ತಿದ್ದಾರೆ ರೈತರು
ಇದನ್ನೂ ಓದಿ : ನಿಮಗೆ ಊಟ ಹಾಕೋದಿಲ್ಲ, ಎದ್ದೋಗಿ – ಮುಸ್ಲಿಂ ಮದುವೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿಗೆ ಅವಮಾನ!



















