ಹೈದರಾಬಾದ್: ತೆಲುಗು ನಟ, ಚಿತ್ರಕಥೆ ಬರಹಗಾರ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಪೋಸಾನಿ ಕೃಷ್ಣ ಮುರಳಿ ಅವರನ್ನು ಬುಧವಾರ ಹೈದರಾಬಾದ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ. ಆಂಧ್ರ ಪ್ರದೇಶದ ಸಚಿವ ಪವನ್ಕಲ್ಯಾಣ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುರಳಿ ಮೇಲೆ ಜಾತಿ ನಿಂದನೆ ಆರೋಪವೂ ಇದೆ.
ಬಂಧನದ ವೇಳೆ ಮುರಳಿ ಪೊಲೀಸರ ಜತೆ ವಾಗ್ವಾದ ನಡೆಸಿದ ಪ್ರಕರಣವೂ ನಡೆಯಿತು. ಆ ದೃಶ್ಯಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವೀಡಿಯೋದಲ್ಲಿ, ಆರೋಗ್ಯ ಸಮಸ್ಯೆ ಇದ್ದ ಕಾರಣ ನಾನು ಪೊಲೀಸ್ ಠಾಣೆಗೆ ಬರುವುದಿಲ್ಲ ಎಂದು ಹೇಳುವುದು ಕೇಳಿಸಿದೆ.
ಮುರಳಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಸಂಬಂಧ ಹಲವು ಪ್ರಕರಣಗಳು ದಾಖಲಾಗಿದ್ದವು. ಅವರ ಬಂಧನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕುಟುಂಬ ಸದಸ್ಯರಿಗೆ ನೀಡಿದ ಬಳಿಕ ವಶಕ್ಕೆ ಪಡೆಯಲಾಯಿತು. ಅವರ ಪತ್ನಿಗೆ ನೀಡಲಾದ ಬಂಧನ ನೋಟೀಸ್‌ನಲ್ಲಿ, ” ಆರೋಪ ಗಂಭೀರ ಮತ್ತು ಜಾಮೀನು ರಹಿತ. ಅವರನ್ನು ರಾಜಂಪೇಟೆಯ ನ್ಯಾಯಾಧೀಶರ ಮುಂದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.” ಎಂದು ಉಲ್ಲೇಖಿಸಲಾಗಿದೆ.
ಮುರಳಿ ವಿರುದ್ಧ ಅಂಬುಲವರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 196, 353(2), 111, ಎಸ್ಸಿ/ಎಸ್ಟಿ ಕಾಯ್ದೆಯ 3(5) ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.
ಇದು ಮುರಳಿಯ ಮೊದಲ ಬಂಧನವಲ್ಲ. 2024ರ ನವೆಂಬರ್‌ನಲ್ಲಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಮೊದಲ ಬಾರಿ ಬಂಧನಕ್ಕೆ ಒಳಗಾಗಿದ್ದರು.
ತೆಲುಗು ಚಿತ್ರರಂಗದಲ್ಲಿ ದಶಕಗಳಿಂದ ಸಕ್ರಿಯರಾಗಿರುವ ಮುರಳಿ, 150ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಅಲ್ಲದೆ, ಅವರು ಹಲವಾರು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.