ಢಾಕಾ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಹಣಕಾಸು ಸಮಿತಿಯ ಮಾಜಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಮ್ಮ ಮುಷ್ಕರ ಅಂತ್ಯಗೊಳ್ಳುವುದಿಲ್ಲ ಎಂದು ಬಾಂಗ್ಲಾದೇಶದ ವೃತ್ತಿಪರ ಕ್ರಿಕೆಟಿಗರು ಬಿಗಿಪಟ್ಟು ಹಿಡಿದಿದ್ದಾರೆ.
ಈಗಾಗಲೇ ಆಟಗಾರರ ಮುಷ್ಕರದಿಂದಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಮತ್ತು ಢಾಕಾ ಪ್ರೀಮಿಯರ್ ಲೀಗ್‌ನ ಹಲವು ಪಂದ್ಯಗಳು ರದ್ದುಗೊಂಡಿವೆ. ನಜ್ಮುಲ್ ಇಸ್ಲಾಂ ಅವರು ಈ ಹಿಂದೆ ಆಟಗಾರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಅವರು ಕ್ಷಮೆ ಕೋರಲೇಬೇಕು ಎಂಬುದು ಕ್ರಿಕೆಟಿಗರ ಪ್ರಮುಖ ಬೇಡಿಕೆಯಾಗಿದೆ.
ಬಿಸಿಬಿ ಈಗಾಗಲೇ ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದೆ. ಆದರೆ, ಅವರನ್ನು ನಿರ್ದೇಶಕ ಸ್ಥಾನದಿಂದಲೂ ವಜಾಗೊಳಿಸಬೇಕು ಎಂದು ಆಟಗಾರರು ಒತ್ತಾಯಿಸುತ್ತಿದ್ದಾರೆ. ವರದಿಗಳ ಪ್ರಕಾರ, ನಜ್ಮುಲ್ ಅವರು ಮುಚ್ಚಿದ ಕೋಣೆಯಲ್ಲಿ ಕ್ಷಮೆ ಕೇಳಲು ಒಪ್ಪಿದ್ದರಾದರೂ, ಆಟಗಾರರು ಅದನ್ನು ತಿರಸ್ಕರಿಸಿದ್ದು, ಸಾರ್ವಜನಿಕವಾಗಿಯೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅವಹೇಳನಕಾರಿ ಮಾತು
ಬಾಂಗ್ಲಾದೇಶ ಕ್ರಿಕೆಟಿಗರ ಕ್ಷೇಮಾಭಿವೃದ್ಧಿ ಸಂಘದ (CWAB) ನೇತೃತ್ವ ವಹಿಸಿರುವ ಮೊಹಮ್ಮದ್ ಮಿಥುನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ನಜ್ಮುಲ್ ಇಸ್ಲಾಂ ಅವರು ಆಟಗಾರರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಅವರ ಕ್ಷಮೆಯಾಚನೆಯೂ ಸಾರ್ವಜನಿಕವಾಗಿಯೇ ಇರಬೇಕು. ಒಂದು ವೇಳೆ ಅವರು ಕ್ಷಮೆ ಕೋರಿದರೆ, ಶುಕ್ರವಾರದಿಂದಲೇ ನಾವು ಬಿಪಿಎಲ್ ಪಂದ್ಯಗಳಲ್ಲಿ ಭಾಗವಹಿಸಲು ಸಿದ್ಧರಿದ್ದೇವೆ,” ಎಂದು ತಿಳಿಸಿದ್ದಾರೆ.
ನಜ್ಮುಲ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲು ಬಿಸಿಬಿ ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರೈಸಬೇಕಿರುವುದರಿಂದ, ಅದಕ್ಕೆ ಸಮಯ ನೀಡಲು ಆಟಗಾರರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸದ್ಯಕ್ಕೆ ಬಿಕ್ಕಟ್ಟು ಬಗೆಹರಿಯಬೇಕಾದರೆ ನಜ್ಮುಲ್ ಅವರ ಕ್ಷಮೆಯಾಚನೆ ಅನಿವಾರ್ಯವಾಗಿದೆ. ಅಲ್ಲಿಯವರೆಗೂ ಬಾಂಗ್ಲಾದೇಶದ ದೇಸಿ ಕ್ರಿಕೆಟ್‌ನ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.
ಇದನ್ನೂ ಓದಿ ; ಬ್ಯಾನರ್ ಗಲಭೆ | ನಾಳೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ.. ಮದ್ಯ ಮಾರಾಟ ಬಂದ್!


















