ದುಷ್ಕರ್ಮಿಗಳು ಯುವಕನನ್ನು ಮನಬಂದಂತೆ ಥಳಿಸಿ ಜೀವಂತವಾಗಿ ಹೂತು ಹಾಕಿರುವ ಘಟನೆಯೊಂದು ನಡೆದಿದೆ. ಆದರೆ, ದೇವರ ರೂಪದಲ್ಲಿ ಬಂದ ನಾಯಿಗಳು ವ್ಯಕ್ತಿಯ ಜೀವ ಉಳಿಸಿವೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪಾಪಿಗಳು ಯುವಕನ್ನು ಮನಬಂದಂತೆ ಥಳಿಸಿ ಸಮಾಧಿ ಮಾಡಿದ ಕೆಲವು ಹೊತ್ತಿನಲ್ಲಿ ರಕ್ತದ ವಾಸನೆ ಕಂಡು ಹಿಡಿದ ನಾಯಿಗಳು, ಸ್ಥಳಕ್ಕೆ ಬಂದು ಮಣ್ಣು ಅಗೆಯುವ ಮೂಲಕ ಆತನ ಪ್ರಾಣ ಉಳಿಸಿವೆ.
ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು 24 ವರ್ಷದ ರೂಪ್ ಕಿಶೋರ್ ಎಂಬ ಯುವಕನನ್ನು ಥಳಿಸಿ ಆತನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಪಾಪಿಗಳು ಹೊಡೆದ ಏಟಿಗೆ ಯುವಕ ಪ್ರಜ್ಞೆ ತಪ್ಪಿದ್ದಾನೆ. ಆಗ ಈತ ಸತ್ತು ಹೋಗಿದ್ದಾನೆ ಎಂದು ಭಾವಿಸಿದ ದುಷ್ಕರ್ಮಿಗಳು ಯುವಕನ್ನು ಜೀವಂತ ಸಮಾಧಿ ಮಾಡಿದ್ದಾರೆ. ಮಧ್ಯರಾತ್ರಿ ವೇಳೆ ರಕ್ತದ ವಾಸೆಯನ್ನು ಹಿಡಿದು ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆದು, ಮಣ್ಣಿನಡಿಯಲ್ಲಿದ್ದ ಯುವಕನ ದೇಹವನ್ನು ಎಳೆದಾಡಿ ತಿನ್ನಲು ಯತ್ನಿಸಿವೆ. ಈ ಸಂದರ್ಭದಲ್ಲಿ ಯುವಕನಿಗೆ ಪ್ರಜ್ಞೆ ಬಂದಿದ್ದು, ಕೂಡಲೇ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾನೆ. ನಂತರ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಮನೆಯವರ ಸಂಪರ್ಕ ಮಾಡಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಯುವಕನ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.