ಹುಬ್ಬಳ್ಳಿ, : ED ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿ ಕೊಟ್ಟ ಗ್ಯಾಂಗವೊಂದು ಕೇರಳ ಮೂಲದ ವ್ಯಾಪಾರಿಯನ್ನು ಹೆದರಿಸಿ ಬರೋಬ್ಬರಿ 3 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿರುವಂತಹ ಘಟನೆ ನಗರದ ಹೃದಯಭಾಗ ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ನಡೆದಿದೆ.
ಕಳೆದ ಗುರುವಾರದಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದೆ.
ಕೇರಳದ ವ್ಯಾಪಾರಿ ಸುದೀನ್ ಎಂ.ಆರ್, ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಾರೆ. ಹೀಗಾಗಿ ನ. 15ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ್ ಜೊತೆ ಬಂದಿದ್ದರು. ಚೈನ್, ಬ್ರಾಸ್ಲೈಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಬಿಟ್ಟು 3.2 ಕೋಟಿ ರೂ. ಮೌಲ್ಯದ ಆಭರಣಗಳನ್ನು ತಂದಿದ್ದರು.
ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ ಆರ್ಡರ್‌ಗಳನ್ನು ಪಡೆದಿದ್ದರು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಧಾರವಾಡಕ್ಕೆ ಹೋಗಿ ಹೋಟೆಲ್‌ಗೆ ವಾಪಸ್ ತೆರಳುತ್ತಿದ್ದ ವೇಳೆ ನೀಲಿಜನ್ ರಸ್ತೆಯಲ್ಲಿ ಐವರ ಗ್ಯಾಂಗ್ ಅವರನ್ನು ತಡೆದಿದ್ದಾರೆ.
ಇ.ಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿದ ಆರೋಪಿಗಳು, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್ರನ್ನು ಗ್ಯಾಂಗ್ ಬೆದರಿಸಿದೆ.
ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ. ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ್ರನ್ನ ದುಷ್ಕರ್ಮಿಗಳು ಇಳಿಸಿದ್ದಾರೆ. ನಂತರ ಸುದೀನ್ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಗೆ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬಿಟ್ಟಿದ್ದು, ನಗದು ಹಾಗೂ ಚಿನ್ನಾಭರಣದೊಂದಿಗೆ ಗ್ಯಾಂಗ್ ಎಸ್ಕೇಪ್ ಆಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ ; ನಾನು ಯಾವ ಬಣನೂ ಅಲ್ಲ | ಯೋಗೇಶ್ವರ್



















