ಬೆಂಗಳೂರು: ಒಬ್ಬ ವ್ಯಕ್ತಿಯ ಆರ್ಥಿಕ ಶಿಸ್ತನ್ನು ಅಳೆಯಲು ಆಧುನಿಕ ಕಾಲದಲ್ಲಿ ಸಿಬಿಲ್ ಸ್ಕೋರ್ ಅನ್ನೇ ಬಳಸಲಾಗುತ್ತಿದೆ. ಸಿಬಿಲ್ ಸ್ಕೋರ್ ನೋಡಿಕೊಂಡೇ ಬ್ಯಾಂಕ್ ಗಳು ಸಾಲ ನೀಡುತ್ತವೆ. ಒಳ್ಳೆಯ ಸಿಬಿಲ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿಗೂ ಸಾಲ ಸಿಗುತ್ತದೆ. ಅಷ್ಟರಮಟ್ಟಿಗೆ ಸಿಬಿಲ್ ಸ್ಕೋರ್ ಪ್ರಮುಖ ಸಂಗತಿಯಾಗಿದೆ. ಇದರ ಮಧ್ಯೆಯೇ, ಬ್ಯಾಂಕಿಂಗ್ ಉದ್ಯೋಗಕ್ಕೂ ಈಗ ಸಿಬಿಲ್ ಸ್ಕೋರ್ ಪ್ರಮುಖ ಸಂಗತಿಯಾಗಿದೆ. ಒಬ್ಬ ವ್ಯಕ್ತಿಯ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಇನ್ನುಮುಂದೆ ಆತನಿಗೆ ಬ್ಯಾಂಕ್ ಗಳು ಜಾಬ್ ನೀಡಲಿವೆ. ಇಲ್ಲದಿದ್ದರೆ ಉದ್ಯೋಗ ನೀಡುವುದಿಲ್ಲ.
ಐಬಿಪಿಎಸ್ (IBPS), ಎಸ್ ಬಿಐ (SBI) ನಂತಹ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳು ಅಭ್ಯರ್ಥಿಗಳ ಆಯ್ಕೆಯ ಸಮಯದಲ್ಲಿ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸುತ್ತಿವೆ. ಸಾಮಾನ್ಯವಾಗಿ ಬ್ಯಾಂಕ್ ಉದ್ಯೋಗಕ್ಕೆ ಕನಿಷ್ಠ 650 ರಿಂದ 675 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇರಬೇಕೆಂದು ನಿರೀಕ್ಷಿಸಲಾಗುತ್ತದೆ.
ಏನಿದಕ್ಕೆ ಕಾರಣ?
ಬ್ಯಾಂಕ್ ಸಿಬ್ಬಂದಿಯು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸಬೇಕಾಗಿರುವುದರಿಂದ, ಅವರ ಆರ್ಥಿಕ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿಗೆ ಕೆಲಸಕ್ಕೆ ಸೇರುತ್ತಿರುವವರು ಅಥವಾ ಈ ಹಿಂದೆ ಯಾವುದೇ ಸಾಲ/ಕ್ರೆಡಿಟ್ ಕಾರ್ಡ್ ಪಡೆಯದವರಿಗೆ (ಸಿಬಿಲ್ ಹಿಸ್ಟರಿ ಇಲ್ಲದವರಿಗೆ) ಸಾಮಾನ್ಯವಾಗಿ ಇದರಿಂದ ವಿನಾಯಿತಿ ಇರುತ್ತದೆ.
ನೀವು ಯಾವುದಾದರೂ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದರೆ (Defaulter), ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಬ್ಯಾಂಕುಗಳು ರದ್ದುಗೊಳಿಸುವ ಅಧಿಕಾರ ಹೊಂದಿರುತ್ತವೆ. ಹೊಸ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಸಂಸತ್ತಿಗೆ ಮಾಹಿತಿ ನೀಡಿದೆ. ಹಾಗಾಗಿ, ಸಾಲ, ಬಡ್ಡಿದರದ ಜತೆಗೆ ಉದ್ಯೋಗದ ದೃಷ್ಟಿಯಿಂದಲೂ ಈಗ ಸಿಬಿಲ್ ಸ್ಕೋರ್ ನಿರ್ವಹಿಸುವುದು ಮುಖ್ಯವಾಗಿದೆ.
ಇದನ್ನೂ ಓದಿ : ಎಸ್ಐಪಿ ಹೂಡಿಕೆ ನಿಲ್ಲಿಸಿದ 75% ಜನ : ಮಾರುಕಟ್ಟೆ ಕುಸಿತದ ವೇಳೆ ನೀವೇನು ಮಾಡಬೇಕು? ತಜ್ಞರು ಹೇಳೋದೇನು?



















