ಬೆಂಗಳೂರು: ಸರ್ಕಾರಿ ಬ್ಯಾಂಕ್ ಗಳಲ್ಲಿ ಹೊಸ ಸಾಲ ಮೌಲ್ಯಮಾಪನ ಮಾದರಿ ಸಿದ್ಧವಾಗಿದ್ದು, ಎಂಎಸ್ಎಂಇಗಳಿಗೆ ಅಡಮಾನರಹಿತವಾಗಿ 100 ಕೊಟಿ ರೂಗಳವರೆಗೆ ಸಾಲ ಸಿಗುವ ಅವಕಾಶ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನ್ಯಾಷನಲ್ ಎಂಎಸ್ಎಂಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹೊಸ ಕ್ರೆಡಿಟ್ ಗ್ಯಾರಂಟೀ ಸ್ಕೀಮ್ನಿಂದ ಎಂಎಸ್ಎಂಇಗಳ ಫಂಡಿಂಗ್ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟರ್ಮ್ ಲೋನ್, ಮೆಷಿನರಿಗಳಿಗೆ ಲೋನ್ಗಳು ಸಿಗುವುದಿಲ್ಲ ಎಂಬುವುದು ಎಂಎಸ್ಎಂಇಗಳಿಗೆ ನೋವಿತ್ತು. ಆದರೆ, ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ನಲ್ಲಿ ಎಂಎಸ್ಎಂಇಗಳಿಗೆ 100 ಕೋಟಿ ರೂವರೆಗೆ ಸಾಲಕ್ಕೆ ಗ್ಯಾಂರಂಟಿ ಸಿಗುತ್ತದೆ. ನೀವು ಬ್ಯಾಂಕ್ನಿಂದ 100 ಕೋಟಿ ರೂಗೂ ಹೆಚ್ಚು ಮೊತ್ತದ ಸಾಲ ಪಡೆಯಲು ಹೋದರೂ ಸರ್ಕಾರದಿಂದಲೇ ನೂರು ಕೋಟಿ ರೂಗೆ ಗ್ಯಾರಂಟಿ ಕೊಡಲಾಗುತ್ತದೆ. ಅಂದರೆ, ಅಡಮಾನರಹಿತವಾಗಿ ನೀವು 100 ಕೋಟಿ ರೂವರೆಗೆ ಸಾಲ ಪಡೆಯಬಹುದು ಎಂದು ಹೇಳಿದ್ದಾರೆ.
ಸಿಡ್ಬಿ (SIDBI) ಬ್ಯಾಂಕ್ನ ಆರು ಹೊಸ ಶಾಖೆಗಳ ವ್ಯಾಪ್ತಿಗೆ 20 ಕೈಗಾರಿಕಾ ಕ್ಲಸ್ಟರ್ಗಳು ಬರುತ್ತವೆ. ಇದರಿಂದ ಕರ್ನಾಟಕದಲ್ಲಿ ಎಂಎಸ್ಎಂಇಗಳಿಗೆ ಹೆಚ್ಚು ಬಲ ಸಿಗಬಹುದು. ಕರ್ನಾಟಕದಲ್ಲಿರುವ ಸಿಡ್ಬಿ ಬ್ಯಾಂಕ್ ಶಾಖೆಗಳ ಪೋರ್ಟ್ಫೋಲಿಯೋದಲ್ಲಿ 1,169 ಕೋಟಿ ರೂ ಇದೆ. ಅನುತ್ಪಾದಕ ಸಾಲ ಆಸ್ತಿ ಯಾವುದೂ ಇಲ್ಲ. ಇದರಿಂದ ರಾಜ್ಯವಷ್ಟೇ ಅಲ್ಲದೇ, ಕೈಗಾರಿಕೆಗಳ ಸಾಮರ್ಥ್ಯ ಬಲಗೊಳ್ಳಲಿದೆ ಎಂದು ಸಚಿವೆ ಹೇಳಿದ್ದಾರೆ.