ಬೆಂಗಳೂರು: ನಗರದಾದ್ಯಂತ ಇ-ಖಾತಾ ಮೇಳ ಆಯೋಜನೆ ಮಾಡಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಲು ನಾಗರಿಕರಲ್ಲಿ ಅರಿವು ಮೂಡಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದ ಭಾಗವಾಗಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 4 ಸ್ಥಳಗಳಲ್ಲಿ ಇ-ಖಾತಾ ಮೇಳಗಳನ್ನು ಆಯೋಜಿಸಿದ್ದು, ಅದರಿಂದ ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ಕೆರೆ ಪರಿಶೀಲನೆ:
ಯಲಹಂಕ ಕೆರೆಗೆ ಮಾನ್ಯ ಸ್ಥಳೀಯ ಶಾಸಕರಾದ ಶ್ರೀ ವಿಶ್ವನಾಥ್ ರವರೊಂದಿಗೆ ಭೇಟಿ ನೀಡಿ ಕೆರೆ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೆರೆ ಭಾಗದಲ್ಲಿ ವಾಯು ವಿಹಾರ, ಸಸಿಗಳ ಪೋಷಣೆ ಸೇರಿದಂತೆ ಇನ್ನಿತರೆ ನಿರ್ವಹಣೆ ಸರಿಯಾಗಿ ಮಾಡಲು ಸೂಚನೆ ನೀಡಲಾಯಿತು. ಜೊತೆಗೆ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ:
ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ಅಗಲೀಕರಣ ಮಾಡಲಾಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮಣಿಪಾಲ್ ಹಾಗೂ ನಿಟ್ಟೆ ಮಹಾವಿದ್ಯಾಲಯದ ಬಳಿ ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸಿದ್ದು, ಅದನ್ನು ತೆರವುಗೊಳಿಸಿ ಮತ್ತೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಕ್ರಮವಹಿಸಲು ಸೂಚನೆ ನೀಡಿದರು.
ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ರೈಲ್ವೆ ಸಮಸ್ಯೆಗಳ ಪರಿಶೀಲನೆ:
ಮಲ್ಲೇಶ್ವರಂ ಸುಬ್ರಮಣ್ಯ ನಗರದಿಂದ 8ನೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ2) ಬಳಿ ರೈಲ್ವೆ ಕೆಳ ಸೇತುವೆ ನಿರ್ಮಿಸಬೇಕಿದೆ. ಆದರೆ, ಸದರಿ ಜಾಗದಲ್ಲಿ ಕೆ-ರೈಡ್ ನಿಂದ ಸಬ್ ಅರ್ಬಲನ್ ಲೈನ್ ಕೂಡಾ ಬರಲಿದೆ. ಆದ್ದರಿಂದ ಸಾಧಕ-ಬಾಧಕಗಳನ್ನು ಪರಿಶೀಲಿಸಿ ರೈಲ್ವೆ ಕೆಳಸೇತುವೆ ನಿರ್ಮಿಸುವ ಕುರಿತು ಹೊಸದಾಗಿ ವಿನ್ಯಾಸ ಸಿದ್ದಪಡಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆ ಬಳಿಕ ಯಶವಂತಪುರ ಜಂಕ್ಷನ್ ನಿಂದ ತುಮಕೂರು ಕಡೆ ಹೋಗುವ 414ಎ ಸೇತುವೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದ್ದು, ಅದನ್ನು ಬಗೆಹರಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಂಡು ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಯ ಭೂಸ್ವಾಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳೊಂದಿಗೆ ಸಭೆ:
ಪರಿಶೀಲನೆಯ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಎಲ್ಲಾ ಪಾದಚಾರಿ ಮಾರ್ಗಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ವಿದ್ಯುತ್ ದೀಪಗಳ ನಿರ್ವಹಣೆಯ ಸಮಸ್ಯೆ ಇದ್ದು, ಅದನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದ ವೇಳೆ ಯಾವುದೇ ರೀತಿಯ ಪ್ರವಾಹವಾಗದಂತೆ ಕ್ರಮ ಕೈಗೊಳ್ಳಬೇಕು. ನಿಯಮ ಬಾಹೀರವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ಮೇಲೆ ನಿಗಾವಹಿಸಿ ಅಂತಹ ಕಟ್ಟಡಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಪಾಯ ಸ್ಥಿತಿಯಲ್ಲಿರುವ ಹಾಗೂ ಒಣಗಿದ ಮರಣಗಳನ್ನು ತೆರವುಗೊಳಿಸಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿರುವ ಮರಗಳನ್ನು ಟ್ರಿಮ್ಮಿಂಗ್ ಮಾಡಲು ಸೂಚಿಸಿದರು.
ಈ ವೇಳೆ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಮಮತಾ, ಮುಖ್ಯ ಅಭಿಯಂತರ ರಂಗನಾಥ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.