ನವದೆಹಲಿ : ಇಂದು (ಮಂಗಳವಾರ) ಉಪ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಜಯ ಸಾಧಿಸಿದ್ದು, ದೇಶದ ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆಯಾಗಿದ್ದಾರೆ.
ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್ ಜಯ ಸಾಧಿಸಿದರು. ಈ ಮೂಲಕ 17ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಪರಾಭವಗೊಂಡಿದ್ದಾರೆ.
ಉಪ ರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆ ಸಂಜೆ 5 ಗಂಟೆವರೆಗೆ ಉಭಯ ಮನೆಗಳ (ಲೋಕಸಭೆ, ರಾಜ್ಯಸಭೆ) ಮತದಾನ ಪ್ರಕ್ರಿಯೆ ನಡೆದಿತ್ತು. ಸಂಜೆ 6 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿತ್ತು.
ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಒಳಗೊಂಡಂತೆ ಒಟ್ಟು 788 ಸಂಸದರಿದ್ದಾರೆ. ಪ್ರಸ್ತುತ ಎರಡೂ ಸದನಗಳಲ್ಲಿ 7 ಸ್ಥಾನಗಳು ಖಾಲಿ ಇರುವ ಕಾರಣ ಒಟ್ಟು 781 ಸಂಸದರು ಮತ ಚಲಾಯಿಸಬೇಕಾಗಿತ್ತು. ಆದರೆ ಇದರಲ್ಲಿ ಬಿಆರ್‌ಎಸ್‌ನ 4, ಬಿಜೆಡಿಯ 7, ಅಕಾಲಿ ದಳದ 1 ಮತ್ತು 1 ಸ್ವತಂತ್ರ ಸಂಸದರು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ಒಟ್ಟು 768 ಸಂಸದರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳನ್ನು ನೀಡಿ ಕಳೆದ ಜುಲೈ 21 ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.



















