ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ನಂತರ ವಯಸ್ಕರಲ್ಲಿ ಹಠಾತ್ ಅಕಾಲಿಕ ಸಾವುಗಳು ವರದಿಯಾಗುತ್ತಿದ್ದು, ಅದಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿದೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ವ್ಯಾಪಕ ಮತ್ತು ಸಮಗ್ರ ಅಧ್ಯಯನಗಳು, ಈ ಸಾವುಗಳಿಗೂ ಮತ್ತು ಕೋವಿಡ್ ಲಸಿಕೆಗಳಿಗೂ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ಖಚಿತಪಡಿಸಿವೆ. ಬದಲಾಗಿ, ಜೀವನಶೈಲಿ ಹಾಗೂ ಪೂರ್ವ ಅಸ್ತಿತ್ವದಲ್ಲಿದ್ದ ಕಾಯಿಲೆಗಳು ಇಂತಹ ಘಟನೆಗಳಿಗೆ ಪ್ರಮುಖ ಕಾರಣ ಎಂದು ಈ ಅಧ್ಯಯನಗಳು ಸ್ಪಷ್ಟಪಡಿಸಿವೆ.
ಕೇಂದ್ರ ಸರ್ಕಾರದಿಂದಲೇ ಅಧಿಕೃತ ಸ್ಪಷ್ಟನೆ
ಕರ್ನಾಟಕದಲ್ಲೂ ಹೃದಯಾಘಾತದ ಸಾವುಗಳ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತು ಅಧ್ಯಯನಕ್ಕೆ ಸೂಚಿಸಿದೆ. ಇದರ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಯುವ ವಯಸ್ಕರಲ್ಲಿನ ಹೃದಯಾಘಾತಗಳಿಗೂ ಕೋವಿಡ್-19 ಲಸಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವಾಲಯವು ಖಡಾಖಂಡಿತವಾಗಿ ತಿಳಿಸಿದೆ.
ಕಳೆದ ಕೆಲವು ವರ್ಷಗಳಿಂದ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳ ಬಗ್ಗೆ ಸಾರ್ವಜನಿಕ ಕಳವಳಗಳು ಹೆಚ್ಚಿದ್ದವು. ಈ ಅವಧಿಯಲ್ಲಿ ನಟ ಸಿದ್ಧಾರ್ಥ್ ಶುಕ್ಲಾ (40), ಗಾಯಕ ಕೆಕೆ (53), ನಟ ಪುನೀತ್ ರಾಜ್‌ಕುಮಾರ್ (46), ಚಲನಚಿತ್ರ ನಿರ್ಮಾಪಕ ರಾಜ್ ಕೌಶಲ್ (50) ಮತ್ತು ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ (58) ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಠಾತ್ ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದರು.

ಐಸಿಎಂಆರ್ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC)ವು 18 ರಿಂದ 45 ವರ್ಷ ವಯಸ್ಸಿನ ಯುವ ವಯಸ್ಕರಲ್ಲಿನ ವಿವರಿಸಲಾಗದ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ಆಳವಾಗಿ ಅಧ್ಯಯನ ನಡೆಸಿವೆ:
ಐಸಿಎಂಆರ್ ಅಧ್ಯಯನ: “ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳೊಂದಿಗೆ ಸಂಬಂಧಿಸಿದ ಅಂಶಗಳು– ಬಹುಕೇಂದ್ರಿತ ಹೊಂದಾಣಿಕೆಯ ಪ್ರಕರಣ – ನಿಯಂತ್ರಣ ಅಧ್ಯಯನ” ಎಂಬ ಹೆಸರಲ್ಲಿ ಈ ಅಧ್ಯಯನವನ್ನು ಮೇ ತಿಂಗಳಿಂದ ಆಗಸ್ಟ್ 2023ರವರೆಗೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ಪ್ರಮುಖ ಆಸ್ಪತ್ರೆಗಳಲ್ಲಿ ಕೈಗೊಳ್ಳಲಾಯಿತು. ಅಕ್ಟೋಬರ್ 2021 ಮತ್ತು ಮಾರ್ಚ್ 2023 ರ ನಡುವೆ ಹಠಾತ್ತಾಗಿ ನಿಧನರಾದ, ಆರೋಗ್ಯವಂತರಾಗಿದ್ದ ವ್ಯಕ್ತಿಗಳ ಮೇಲೆ ಇದು ಕೇಂದ್ರೀಕರಿಸಿತ್ತು.
ಏಮ್ಸ್ ಅಧ್ಯಯನ: “ಯುವಕರಲ್ಲಿ ಹಠಾತ್, ವಿವರಿಸಲಾಗದ ಸಾವುಗಳ ಕಾರಣವನ್ನು ಕಂಡುಕೊಳ್ಳುವುದು” ಎಂಬ ಶೀರ್ಷಿಕೆಯ ಎರಡನೇ ಅಧ್ಯಯನವನ್ನು ಐಸಿಎಂಆರ್ ನಿಂದ ಧನಸಹಾಯ ಮತ್ತು ಸಹಯೋಗದೊಂದಿಗೆ ದೆಹಲಿಯ ಏಮ್ಸ್ ಸಂಸ್ಥೆ ನಡೆಸಿದೆ.
ಈ ಎರಡೂ ಅಧ್ಯಯನಗಳ ಸಂಶೋಧನೆಗಳು ಕೋವಿಡ್-19 ಲಸಿಕೆಗಳು ಯುವ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯ ಹೆಚ್ಚಿಸುವುದಿಲ್ಲ ಎಂದು ನಿರ್ಣಾಯಕವಾಗಿ ತಿಳಿಸಿವೆ. “ಹಠಾತ್ ಹೃದಯ ಸಂಬಂಧಿ ಸಾವುಗಳು ಆನುವಂಶಿಕತೆ, ಜೀವನಶೈಲಿ, ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಕೋವಿಡ್ ನಂತರದ ತೊಡಕುಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಂಶಗಳಿಂದ ಉಂಟಾಗಬಹುದು,” ಎಂದು ಹೇಳಿವೆ.
ಇದೇ ವೇಳೆ, ಕೋವಿಡ್ ಲಸಿಕೆಯನ್ನು ಹಠಾತ್ ಸಾವುಗಳಿಗೆ ಲಿಂಕ್ ಮಾಡುವ ಹೇಳಿಕೆಗಳು ಸುಳ್ಳು, ದಾರಿ ತಪ್ಪಿಸುವಂತಹವು ಮತ್ತು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
“ನಿರ್ಣಾಯಕ ಪುರಾವೆಗಳಿಲ್ಲದೆ ಊಹಾತ್ಮಕ ಹೇಳಿಕೆಗಳು ಲಸಿಕೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತವೆ. ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸುವಲ್ಲಿ ಲಸಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ. ಅಂತಹ ಅಸಮರ್ಥನೀಯ ವರದಿಗಳು ಮತ್ತು ಹೇಳಿಕೆಗಳು ದೇಶದಲ್ಲಿ ಲಸಿಕೆ ಹಿಂಜರಿಕೆಗೆ ಕಾರಣವಾಗಬಹುದು. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು,” ಎಂದು ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.