ಲಖನೌ: ಹೆಣ್ಣುಮಕ್ಕಳ ಸ್ತನ ಮುಟ್ಟಿ, ಅವರ ಪೈಜಾಮಾದ ಲಾಡಿ ಎಳೆದರೆ ಅದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸಿದಂತೆ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಆದರೆ, ಇದು ಲೈಂಗಿಕ ದೌರ್ಜನ್ಯ ಪ್ರಕರಣ ಎಂಬುದಾಗಿ ಪರಿಗಣಿಸಲಾಗುವುದು ಎಂದು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
2021ರಲ್ಲಿ ಪವನ್ ಹಾಗೂ ಆಕಾಶ್ ಎಂಬುವರು 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಬಾಲಕಿಯ ಸ್ತನ ಮುಟ್ಟಿ, ಆಕೆಯ ಪೈಜಾಮಾದ ಲಾಡಿ ಎಳೆದು, ರಸ್ತೆ ಬದಿ ಎಳೆದುಕೊಂಡು ಹೊರಟಿದ್ದರು. ಇದೇ ವೇಳೆ ದಾರಿಹೋಕರು ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಿಸಿದ್ದರು. ಇದಾದ ಬಳಿಕ ಆಕಾಶ್ ಹಾಗೂ ಪವನ್ ವಿರುದ್ಧ ಆಗಿನ ಐಪಿಸಿ (ಈಗ ಬಿಎನ್ ಎಸ್) 376ನೇ ಸೆಕ್ಷನ್ (ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇಬ್ಬರೂ ಆರೋಪಿಗಳ ವಿರುದ್ಧ ಐಪಿಸಿಯ 376ನೇ ಸೆಕ್ಷನ್ (ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಅಧೀನ ನ್ಯಾಯಾಲಯವು ಅನುಮತಿ ನೀಡಿತ್ತು. ಆದರೆ, ಆರೋಪಿಗಳ ಪರ ವಕೀಲರು ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್, ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಅಲ್ಲ ಎಂದು ಹೇಳಿದೆ.
“ಪವನ್ ಹಾಗೂ ಆಕಾಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆದರೆ, ಸ್ತನ ಹಿಡಿಯುವುದು ಹಾಗೂ ಪೈಜಾಮಾದ ಲಾಡಿ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಅನಿಸುವುದಿಲ್ಲ. ಹಾಗಾಗಿ, ಇವರ ವಿರುದ್ಧ ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ದೋಷಾರೋಪ ಹೊರಿಸಲು ಆಗುವುದಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಹೇಳಿದ್ದಾರೆ.