ಮಂಗಳೂರು : ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರರನ್ನು ಜು.11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿತು ಎಂದು ದೂರುದಾರನ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ, ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಪ್ರಕರಣದ ದೂರುದಾರರಿಗೆ witness protection scheme 2018 ರ ಅಡಿಯಲ್ಲಿ ಸೂಕ್ತ ರಕ್ಷಣೆ ನೀಡಲಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜು. 10ರಂದು ನಮಗೆ ಸಂದೇಶ ಕಳುಹಿಸಿದ್ದರು. ದೂರುದಾರರು, ರಕ್ಷಣೆ ನೀಡುವಂತೆ ನೀಡಿದ್ದ ಕೋರಿಕೆಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ, ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ದೂರುದಾರರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.