ವಿಜಯಪುರ : ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಹಿಂದೂ ಯುವಕರಿಗೆ 5 ಲಕ್ಷ ರೂ. ನೀಡುವುದಾಗಿ ಘೋಷಿಸಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಬಿಜೆಪಿ ಉಚ್ಛಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕಲಬುರಗಿ ವಿಭಾಗೀಯ ನ್ಯಾಯಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ಕೊಪ್ಪಳ ನಗರದಲ್ಲಿ ಕಳೆದ ತಿಂಗಳು ಯತ್ನಾಳ್ ವಿವಾದಾತ್ಮಕ ಘೋಷಣೆಯೊಂದನ್ನು ಮಾಡಿದ್ದರು. ಅವರ ಹೇಳಿಕೆ ವಿರುದ್ಧ ವಿಜಯಪುರ, ಕಲಬುರ್ಗಿ ಹಾಗೂ ಕೊಪ್ಪಳದಲ್ಲಿ ಮೂರು ದೂರುಗಳು ದಾಖಲಾಗಿದ್ದವು.
ವಿಜಯಪುರ, ಕಲಬುರಗಿಯಲ್ಲಿ ದಾಖಲಾಗಿದ್ದ ದೂರುಗಳನ್ನು ಪೊಲೀಸ್ ಇಲಾಖೆ ಕೊಪ್ಪಳಕ್ಕೆ ವರ್ಗಾಯಿಸಿತ್ತು. ಈ ದೂರುಗಳ ರದ್ದತಿ ಕೋರಿ ಕಲಬುರಗಿ ವಿಭಾಗೀಯ ಪೀಠಕ್ಕೆ ಯತ್ನಾಳ್ ಅರ್ಜಿ ಸಲ್ಲಿಸಿದ್ದರು. ಯತ್ನಾಳ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಮೂರ್ತಿ ಎಂಐ ಅರುಣ್ ಅವರ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ.