ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ದಂಪತಿ ಹಲ್ಲೆ ನಡೆಸಿದ ಘಟನೆ ಕೇಳಿ ಬಂದಿದೆ. ವಿಚಾರಣೆಗೆಂದು ಬಂದ ಎಎಸ್‌ಐನ ಮೊಬೈಲ್ ಕಸಿದು ಥಳಿಸಿದ್ದಲ್ಲದೇ, ಘಟನೆ ತಿಳಿದು ಸ್ಥಳಕ್ಕೆ ಬಂದ ಪಿಎಸ್‌ಐ ಮೇಲೆಯೂ ದಂಪತಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಒಂದೇ ತಾಂಡಾದ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆ ರಾಮಪ್ಪ ದಂಪತಿಯ ಮೇಲೆ ಮಲ್ಲಪ್ಪ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆ ವಿಚಾರಣೆಗೆ ತೆರಳಿದ್ದ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ತಂಡದ ಮೇಲೆ ಆರೋಪಿಗಳಾದ ರಾಮಪ್ಪ ಕೃಷ್ಣ (35) ಮತ್ತು ಪತ್ನಿ ಸಕ್ಕುಬಾಯಿ (30) ದೌರ್ಜನ್ಯ ಎಸಗಿದ್ದಾರೆ.
ವಿಚಾರಣೆ ಸಮಯದಲ್ಲೇ ಏಕಾಏಕಿ ಕೋಪಗೊಂಡ ದಂಪತಿ ಎಎಸ್‌ಐ ಮೇಲೆ ಹಲ್ಲೆ ನಡೆಸಿ, ಅವರ ಬಟ್ಟೆ ಹರಿದು, ಮೊಬೈಲ್ ಒಡೆದು, ಕಂಬಕ್ಕೆ ಕಟ್ಟಿಹಾಕಿ ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಪೊಲೀಸರ ಎದುರೇ ಮಲ್ಲಪ್ಪನ ಮಗ ರಾಘವೇಂದ್ರನನ್ನೂ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ . ಬಳಿಕ ಆರೋಪಿಗಳು ಎಎಸ್‌ಐಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆಂದು ಆರೋಪಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮುದಗಲ್ ಠಾಣೆಯ ಪಿಎಸ್‌ಐ ವೆಂಕಟೇಶ್ ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಘಟನೆಯಿಂದ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ಪಿಎಸ್‌ಐ ವೆಂಕಟೇಶ್ ಗಂಭೀರವಾಗಿ ಗಾಯಗೊಂಡು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ತಿಥಿ’ ಸಿನಿಮಾ ಖ್ಯಾತಿಯ ಹಿರಿಯ ನಟ ಗಡ್ಡಪ್ಪ ವಿಧಿವಶ



















