ಮುಂಬಯಿ: ತಮ್ಮ ಮಕ್ಕಳ ಶವಗಳನ್ನು ಹೆಗಲ ಮೇಲೆಯೇ ದಂಪತಿ ಹೊತ್ತು ಸಾಗಿರುವ ಮನ ಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅನಾರೋಗ್ಯದಿಂದ ಸಾವನ್ನಪ್ಪಿದ ತಮ್ಮ ಇಬ್ಬರು ಮಕ್ಕಳ ಶವಗಳನ್ನು ಹೊತ್ತುಕೊಂಡು ದಂಪತಿ ಸುಮಾರು 15 ಕಿ.ಮೀ ನಡೆದಿದ್ದಾರೆ. ಈ ಮನಕಲಕುವ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ತಮ್ಮ ಹೆಗಲ ಮೇಲೆ ಇಬ್ಬರು ಗಂಡು ಮಕ್ಕಳ ಶವಗಳನ್ನು ಹೊತ್ತುಕೊಂಡು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೋಡುಗರು ಕಣ್ಣೀರು ಸುರಿಸುತ್ತಿದ್ದಾರೆ.
ಮಹಾರಾಷ್ಟ್ರದ ಪಟ್ಟಿಗಾಂವ್ ಗ್ರಾಮದಲ್ಲಿ ಸೆಪ್ಟೆಂಬರ್ 4ರಂದು ಈ ಘಟನೆ ಸಂಭವಿಸಿದೆ. 6 ಮತ್ತು 3 ವರ್ಷ ವಯಸ್ಸಿನ ಇಬ್ಬರು ಅಣ್ಣ-ತಮ್ಮ ಸೆಪ್ಟೆಂಬರ್ 4ರಂದು ಜ್ವರದಿಂದ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಸ್ಥಳೀಯ ಪಂಡಿತರ ಹತ್ತಿರ ಕರೆದುಕೊಂಡು ಹೋಗಿದ್ದಾರೆ.
ಆದರೆ, ಅಲ್ಲಿ ಮಕ್ಕಳ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿ ಅಲ್ಲಿಂದ ಪಟ್ಟಿಗಾಂವ್ ನಿಂದ ಜಿಮ್ಲಗಟ್ಟಾದಲ್ಲಿನ ಆರೋಗ್ಯ ಕೇಂದ್ರಕ್ಕೆ ತೆರಳಲು ಮುಂದಾಗಿದ್ದಾರೆ. ಆದರೆ, ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯಿಲ್ಲದೆ, ಆಂಬ್ಯುಲೆನ್ಸ್ ಸೇವೆ ಇಲ್ಲದೇ, ಮಕ್ಕಳ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.
ಜಿಮ್ಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಲು 15 ಕಿಲೋಮೀಟರ್ ಗಳವರೆಗೆ ನದಿಗಳು, ಕೆಸರಿನ ಹಾದಿಗಳ ಮೂಲಕ ಓಡಿದ್ದಾರೆ. ಆದರೆ, ಮಕ್ಕಳು ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮತ್ತೆ ಅದೇ ಹಾದಿಯಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಊರಿಗೆ ಮರಳಿದ್ದಾರೆ. ಈ ಘಟನೆ ಕೇಳಿಯೇ ಹಲವರ ಕಣ್ಣುಗಳು ಈಗ ಒದ್ದೆಯಾಗುತ್ತಿವೆ.