ಢಾಕಾ: ಬಾಂಗ್ಲಾದಲ್ಲಿ ದೊಡ್ಡಮಟ್ಟದ ಗಲಭೆ ಎಬ್ಬಿಸಿ ಮಾಜಿ ಪ್ರದಾನಿ ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ತಲೆಯ ಮೇಲೆಯೇ ಈಗ ತೂಗುಗತ್ತಿ ನೇತಾಡಲಾರಂಭಿಸಿದೆ. ಬಾಂಗ್ಲಾ ಸೇನೆಯು ಈಗ ಯೂನುಸ್ ವಿರುದ್ಧವೇ ಮಸಲತ್ತು ಆರಂಭಿಸಿದ್ದು, ಬಾಂಗ್ಲಾವು ಸದ್ಯದಲ್ಲೇ ಸೇನಾ ಕ್ಷಿಪ್ರಕ್ರಾಂತಿಗೆ(Coup in Bangladesh) ಸಾಕ್ಷಿಯಾಗುವ ಸುಳಿವು ನೀಡಿದೆ.
ವಖಾರ್ ಉಜ್-ಜಮಾನ್ ನೇತೃತ್ವದ ಬಾಂಗ್ಲಾ ಸೇನೆಯು ಸೋಮವಾರ ತುರ್ತು ಸಭೆ ನಡೆಸಿದ್ದು, ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಪತನಗೊಳಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದು ಹೌದೆಂದಾದರೆ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶವು ಸೇನೆಯ ನಿಯಂತ್ರಣಕ್ಕೆ ಬರುವ ಎಲ್ಲ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸೋಮವಾರ ನಡೆದ ತುರ್ತು ಸಭೆಯಲ್ಲಿ ಐದು ಲೆಫ್ಟಿನೆಂಟ್ ಜನರಲ್ ಗಳು, ಎಂಟು ಮೇಜರ್ ಜನರಲ್ ಗಳು (ಜಿಒಸಿಗಳು), ಸ್ವತಂತ್ರ ಬ್ರಿಗೇಡ್ ಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನದ ನಂತರ ಮೊಹಮ್ಮದ್ ಯೂನುಸ್ ಅವರು ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದಲೂ, ಬಾಂಗ್ಲಾದೇಶದ ಜನರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ, ಸೇನೆಯು ತುರ್ತು ಸಭೆ ನಡೆಸಿ, ದೇಶದಲ್ಲಿ ಸ್ಥಿರತೆಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಮಿಲಿಟರಿಯ ಸಂಭಾವ್ಯ ಪಾತ್ರದ ಕುರಿತು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಒಂದೋ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಸೇನೆಯು ಬಾಂಗ್ಲಾ ಅಧ್ಯಕ್ಷರ ಮೇಲೆ ಒತ್ತಡ ಹೇರಬಹುದು ಅಥವಾ ಯೂನುಸ್ ಸರ್ಕಾರದ ವಿರುದ್ಧ ನೇರವಾಗಿ ದಂಗೆ ಆರಂಭಿಸಬಹುದು ಎಂದು ಮೂಲಗಳು ಹೇಳಿವೆ. ಸೇನೆಯು ತನ್ನ ಮೇಲ್ವಿಚಾರಣೆಯಲ್ಲೇ ರಾಷ್ಟ್ರೀಯ ಏಕತೆಯ ಸರ್ಕಾರವನ್ನು ರಚಿಸುವ ಆಯ್ಕೆ ಬಗ್ಗೆ ಪರಿಶೀಲಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ನಾಯಕರು ಸೇನೆಯ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದಾರೆ. ದೇಶದಲ್ಲಿ ಸರಣಿ ಪ್ರತಿಭಟನೆಗಳನ್ನೂ ಆಯೋಜಿಸಿದ್ದಾರೆ ಇದು ಬಾಂಗ್ಲಾ ಮಿಲಿಟರಿಯೊಳಗಿನ ಅನೇಕ ವಿಭಾಗಗಳನ್ನು ಅಸಮಾಧಾನ ಹೊಗೆಯಾಡುವಂತೆ ಮಾಡಿದೆ.
ಚೀನಾಗೆ ಯೂನುಸ್ ಭೇಟಿ:
ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆಯೇ, ಯೂನುಸ್ ಅವರು ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಚೀನಾ-ಬಾಂಗ್ಲಾದೇಶ ಸಂಬಂಧಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದಾದ ಈ ಭೇಟಿಯನ್ನು ಭಾರತ ಸೇರಿದಂತೆ ಬಾಂಗ್ಲಾದ ನೆರೆಹೊರೆಯ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಅತ್ತ ಯೂನುಸ್ ಚೀನಾಗೆ ಹೋದ ಸಂದರ್ಭದಲ್ಲೇ, ಇತ್ತ ಬಾಂಗ್ಲಾದಾದ್ಯಂತ ಸರಣಿ ಪ್ರತಿಭಟನಾ ಮೆರವಣಿಗೆಗಳನ್ನು ಹತ್ತಿಕ್ಕುವ ಕಾರ್ಯಾಚರಣೆ ಕೈಗೊಳ್ಳಲು ಸೇನೆ ಯೋಜನೆ ರೂಪಿಸಿದೆ ಎನ್ನಲಾಗಿದೆ. ಈಗಾಗಲೇ ಜಂಟಿ ಭದ್ರತಾ ಪಡೆಗಳು ಗಸ್ತು ಕಾರ್ಯಾಚರಣೆ ಹೆಚ್ಚಳ ಮಾಡಿದ್ದು, ಕಳೆದ ಶುಕ್ರವಾರದಿಂದೀಚೆಗೆ ಹಲವೆಡೆ ಚೆಕ್ ಪಾಯಿಂಟ್ ಗಳನ್ನೂ ಸ್ಥಾಪಿಸಿವೆ.
ಸೇನಾ ಮುಖ್ಯಸ್ಥರ ಮೇಲೆ ಆಕ್ರೋಶ
ಫ್ರಾನ್ಸ್ ಮೂಲದ ಬಾಂಗ್ಲಾದೇಶದ ಸಾಮಾಜಿಕ ಮಾಧ್ಯಮ ಇನ್ ಫ್ಲೂಯೆನ್ಸರ್ ಆಗಿರುವ ಪಿನಾಕಿ ಭಟ್ಟಾಚಾರ್ಯ ಅವರು ಇತ್ತೀಚಿನ ದಿನಗಳಲ್ಲಿ ಸೇನೆಯ ವಿರುದ್ಧ ವ್ಯಾಪಕ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುತ್ತಿದ್ದಾರೆ. ಸೇನಾ ಮುಖ್ಯಸ್ಥರ (ಸಿಎಎಸ್) ವಿರುದ್ಧ ಪ್ರತಿಭಟಿಸುವಂತೆ ಉಗ್ರಗಾಮಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ. ಬಾಂಗ್ಲಾದ ಸೇನಾ ಮುಖ್ಯಸ್ಥರು ಭಾರತದಿಂದ ಪ್ರಭಾವಿತರಾಗಿದ್ದಾರೆ ಎನ್ನುವುದು ಭಟ್ಟಾಚಾರ್ಯ ಅವರ ಆರೋಪವಾಗಿದೆ.
ಈ ಎಲ್ಲ ಉದ್ವಿಗ್ನತೆಯ ಮಧ್ಯೆಯೇ, ಶೇಖ್ ಹಸೀನಾ ಅವರ ಅವಾಮಿ ಲೀಗ್ ದೇಶದಲ್ಲಿ ಮತ್ತೆ ತಲೆಎತ್ತುವಂತೆ ಮಾಡಲು ಸೇನೆಯು ಯೋಜನೆ ರೂಪಿಸುತ್ತಿದೆ ಎಂದು ವಿದ್ಯಾರ್ಥಿಗಳ ನೇತೃತ್ವದ ಪಕ್ಷವು ಆರೋಪಿಸಿದೆ. ಆದರೆ ಈ ಆರೋಪವನ್ನು ಸೇನೆ ನಿರಾಕರಿಸಿದೆ.