ಮೈಸೂರು : ಮಾರ್ಚ್ 30ರಂದು ನಡೆಯಲಿರುವ ನಂಜನಗೂಡಿನ ಪ್ರಸಿದ್ಧ ಗೌಥಮ ಪಂಚ ಜಾತ್ರಾ ಮಹೋತ್ಸವಾದ ಅಂಗವಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.. ಸುಮಾರು 97 ಅಡಿ ಎತ್ತರ ಹಾಗೂ 250 ಟನ್ ತೂಕ ಹೊಂದಿರುವ ನಂಜುಂಡೇಶ್ವರನ ಮಹಾರಥ ಸಿದ್ಧವಾಗಿದ್ದು, ಇದರ ಜೊತೆಗೆ ಪಾರ್ವತಿ , ಗಣೇಶ, ಸುಬ್ರಮಣ್ಯ ಹಾಗೂ ಚಂಡೀಕೇಶ್ವರರ ಪಂಚರಥಗಳ ಸಿದ್ಧತೆಗಳು ಕೂಡ ಅಂತಿಮ ಹಂತದಲ್ಲಿವೆ. ದೇವಸ್ಥಾನವು ಈಗಾಗಲೇ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ರಥೋತ್ಸವದ ದಿನ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಮುಜಾರಾಯಿ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿವೆ. ಭಕ್ತರಿಗಾಗಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳು, ದಸೋಹ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ನೂರಾರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮೂಲಭೂತ ಸೌಕರ್ಯ, ಸ್ವಚ್ಚತೆ ಹಾಗೂ ಭದ್ರತೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಇಂದು ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ



















