ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಕದನ (By Election)ದ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ರಾಜಕೀಯ ಕೆಸರರೆಚಾಟಕ್ಕೆ ಕಾರಣವಾಗಿದ್ದ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದಿದ್ದ ನಾಯಕರ ಶ್ರಮದ ಫಲ ಇಂದು ಹೊರ ಬೀಳಲಿದೆ. ಬಹುತೇಕ 11 ಗಂಟೆಯ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭವಾಗಿದೆ. ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ (Shiggaon) ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರು (Sandur) ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಎಲ್ಲೆಡೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಸೋತರೇ ನಾನೇ ಸೋತಂತೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಕ್ಷೇತ್ರ ಕುಮಾರಸ್ವಾಮಿ ಅವರಿಗೂ ಪ್ರತಿಷ್ಠೆಯ ಕ್ಷೇತ್ರ. ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ್ ಲಾಡ್ ಅವರಿಗೆ ಸಂಡೂರು ಪ್ರತಿಷ್ಠೆಯಾಗಿದೆ.