ಬೆಂಗಳೂರು: ನಕಲಿ ಗುಡ್ ನೈಟ್ ಆಯಿಲ್(Good Night Oil) ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
ಇಲ್ಲಿನ ನಗರದ ಮಾದನಾಯಕನಹಳ್ಳಿ ಬಳಿಯ ಕಾಚೋಹಳ್ಳಿಯಲ್ಲಿ ಈ ನಕಲಿ ಗುಡ್ ನೈಟ್ ತಯಾರಿಸುತ್ತಿದ್ದರು ಎನ್ನಲಾಗಿದೆ. ತಯಾರಿಸಿ, ಸಂಗ್ರಹಿಸುತ್ತಿದ್ದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 3 ಕೋಟಿ ರೂ. ಮೌಲ್ಯದ ನಕಲಿ ಗುಡ್ ನೈಟ್ ಆಯಿಲ್ ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ದಲಪತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ, ಗುಜರಾತ್ ನಿಂದ ನಕಲಿ ಪದಾರ್ಥ ತರಿಸಿಕೊಂಡು, ಬೆಂಗಳೂರಿನಲ್ಲಿ ತಯಾರಿಸಿ ಉತ್ತರ ಕರ್ನಾಟಕದಾದ್ಯಂತ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ಈತ ಕೇವಲ ಗುಡ್ ನೈಟ್ ಮಾತ್ರವಲ್ಲ, ಗುಡ್ ನೈಟ್, ಲೈಜಾಲ್, ಏರಿಯಲ್, ರಿನ್, ವೀಲ್ ಎಕ್ಸೆಲ್, ಟೈಡ್ ಆಯಿಲ್ ಪದಾರ್ಥ ಸೇರಿದಂತೆ ಹಲವು ವಸ್ತುಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಗೊತ್ತಾಗಿದೆ.
ಈತ ಬೆಂಗಳೂರಿನಲ್ಲಿ ತಯಾರಿಸಿ ಹುಬ್ಬಳ್ಳಿಗೆ ನಕಲಿ ಪದಾರ್ಥ ರಫ್ತು ಮಾಡುತ್ತಿದ್ದ ಎನ್ನಲಾಗಿದೆ. ಆ ವಸ್ತುಗಳು ಹುಬ್ಬಳ್ಳಿಯಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಮಾರಾಟವಾಗುತ್ತಿದ್ದವು. ಆಂಧ್ರ, ಕೇರಳ, ತಮಿಳುನಾಡಿಗೂ ನಕಲಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.