ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Elections 2024) ಮತ ಎಣಿಕೆ (Vote Counting)ಗೆ ಕ್ಷಣಗಣನೆ ಆರಂಭವಾಗಿದೆ.
ಮಧ್ಯಾಹ್ನದ ವೇಳೆಗೆ ಯಾರಿಗೆ ಬಹುಮತ ಸಿಗುತ್ತದೆ ಎಂಬುದರ ನಿಖರ ಮಾಹಿತಿ ಸಿಗಲಿದೆ. 543 ಸದಸ್ಯರಿರುವ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಸೂರತ್ ಹಾಗೂ ಇಂದೋರ್ ಹೊರತು ಪಡಿಸಿ ಉಳಿದ ಕ್ಷೇತ್ರಗಳಿಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ ಜರುಗಿತ್ತು.
ಏಪ್ರಿಲ್ 19 (ಹಂತ 1), ಏಪ್ರಿಲ್ 26 (ಹಂತ 2), ಮೇ 7 (ಹಂತ 3), ಮೇ 13 (ಹಂತ 4), ಮೇ 20 (ಹಂತ 5), ಮೇ 25 (ಹಂತ 6), ಮತ್ತು ಜೂನ್ 1 (ಹಂತ 7)ದ ಚುನಾವಣೆ ನಡೆದಿದೆ. ಇಂದು ಏಕಕಾಲದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್ ಸೈಟ್ ನಲ್ಲಿ ಮತ ಎಣಿಕೆಯ ಫಲಿತಾಂಶಗಳನ್ನು ನೋಡಬಹುದು. https://results.eci.gov.in/ ನಲ್ಲಿ ಮತ್ತು iOS ಮತ್ತು Android ಮೊಬೈಲ್ ಗಳಿಗೆ ಮತದಾರರ ಸಹಾಯವಾಣಿ ಅಪ್ಲಿಕೇಶನ್ ನಲ್ಲಿ ಲಭ್ಯವಿರುತ್ತವೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ 2019ರಲ್ಲಿ 352 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಇಂಡಿಯಾ ಮೈತ್ರಿಕೂಟ ಮಾಡಿಕೊಂಡು, ಬಿಜೆಪಿ ಸೋಲಿಸಲು ಮುಂದಾಗಿದ್ದವು. ಇದರ ಮಧ್ಯೆ ಮತದಾರ ಹಣೆಬರಹ ಬರೆದಿದ್ದು, ಇಂದು ಎಲ್ಲವೂ ಬಹಿರಂಗವಾಗಲಿವೆ.