ನವದೆಹಲಿ: ನರೇಂದ್ರ ಮೋದಿ (Narendra Modi) 3.0 ಯುಗಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಇಂದು (ಭಾನುವಾರ) ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ (Narendra Modi) ದೇಶದ ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ (Rashtrapati Bhavan) 3 ಹಂತಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ರಾಜ್ಯ, ದೇಶ ಹಾಗೂ ವಿದೇಶಿ ಗಣ್ಯರೂ ಸೇರಿದಂತೆ ಸುಮಾರು 9 ಸಾವಿರ ಜನರು ಆಗಮಿಸಲಿದ್ದಾರೆ. ಹೀಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿಶ್ವನಾಯಕರು ಕೂಡ ಸಮಾರಂಭಕ್ಕೆ ಆಗಮಿಸಲಿದ್ದಾರೆ. ವಿದೇಶಿ ಗಣ್ಯರು ತಂಗುವ ತಾಜ್, ಮೌರ್ಯ, ಲೀಲಾ ಮತ್ತು ಒಬೆರಾಯ್ ಸೇರಿದಂತೆ ಪ್ರಮುಖ ಹೋಟೆಲ್ಗಳ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಉನ್ನತ ಪೊಲೀಸ್ ಪಡೆ, ರಾಷ್ಟ್ರೀಯ ಭದ್ರತಾ ಪಡೆ (NSG) ನಿಯೋಜಿಸಲಾಗಿದೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವಿಮಾನ, ಡ್ರೋನ್, ಹಾಟ್ ಬಲೂನ್ಗಳ ಹಾರಾಟವನ್ನು ನಿಷೇಧಿಸಲಾಗಿದೆ. ರಾಜಧಾನಿ ಪ್ರವೇಶಿಸುವ ಗಡಿಗಳನ್ನು ಬಂದ್ ಮಾಡಲಾಗಿದೆ.