ಬೆಂಗಳೂರು : ಹೊಸ ವರ್ಷ 2026ನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರು ಸಿದ್ಧವಾಗುತ್ತಿದ್ದು, ಈ ಬಾರಿಯ ನ್ಯೂ ಇಯರ್ ಸೆಲೆಬ್ರೇಷನ್ ಶಾಂತಿಯುತವಾಗಿ ನಡೆಯಲು ಬೆಂಗಳೂರು ಪೊಲೀಸರು ಸಕಲ ಭದ್ರತಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ನಗರದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಫುಲ್ ಅಲರ್ಟ್ ಘೋಷಿಸಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ, ಆಟೋ, ಕಾರ್, ಬೈಕ್ ಸೇರಿದಂತೆ ಪ್ರತಿ ವಾಹನವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಪೊಲೀಸರ ಮುಖ್ಯ ಗುರಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದ ಮೇಲಿದೆ. ಸೆಲೆಬ್ರೇಷನ್‌ಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು, ಪ್ರತಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಬ್ಲಾಸ್ಟ್ ಘಟನೆಯ ಹಿನ್ನೆಲೆ ಬೆಂಗಳೂರು ಪೊಲೀಸರು ಮತ್ತಷ್ಟು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಖುದ್ದು ಡಿಸಿಪಿ (DCP) ಮತ್ತು ಎಸಿಪಿ (ACP) ಮಟ್ಟದ ಅಧಿಕಾರಿಗಳಿಂದ ಭದ್ರತಾ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ : ವಿಮಾನದಲ್ಲಿ ಯುವತಿ ಅಸ್ವಸ್ಥ | ಚಿಕಿತ್ಸೆ ನೀಡಿ ಪ್ರಾಣ ಕಾಪಾಡಿದ ಮಾಜಿ ಶಾಸಕಿ, ಡಾ. ಅಂಜಲಿ ನಿಂಬಾಳ್ಕರ್!



















