ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಹೊಸವರ್ಷದ ಆಚರಣೆಗೆ ಸಿದ್ಧವಾಗಿದ್ದು, ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರದಂತಹ ಪ್ರಮುಖ ಪ್ರದೇಶಗಳು ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ.
ಪಾರ್ಟಿಪ್ರಿಯರು ಹಾಗೂ ಯುವಜನತೆ ಈಗಾಗಲೇ ಪಬ್‌ಗಳು ಮತ್ತು ರಸ್ತೆಗಳತ್ತ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ನಗರದಾದ್ಯಂತ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ 6,000ಕ್ಕೂ ಹೆಚ್ಚು ಸಿಬ್ಬಂದಿ ಕಣ್ಗಾವಲಿರಲಿದೆ.
ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅತಿಯಾಗಿ ಮದ್ಯ ಸೇವಿಸಿ ಮತ್ತಲ್ಲಿ ತೇಲುವರನ್ನು ಪೊಲೀಸರೇ ಮನೆಗೆ ಬಿಡುತ್ತಾರೆ ಎಂಬ ಮಾತುಗಳು ಹಲವೆಡೆ ಹರಿದಾಡುತ್ತಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಲ್ಲ ಮದ್ಯ ಸೇವಿಸಿದವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇರುವುದಿಲ್ಲ. ಆದರೆ, ಅತಿಯಾಗಿ ಕುಡಿದು ಪ್ರಜ್ಞೆ ಕಳೆದುಕೊಂಡವರನ್ನು ಅಥವಾ ನಡೆಯಲು ಅಸಾಧ್ಯವಾದವರನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ 15 ರೆಸ್ಟಿಂಗ್ ಪ್ಲೇಸ್‌ಗಳಿಗೆ ಕರೆದೊಯ್ಯಲಾಗುತ್ತದೆ ಎಂದಿದ್ದಾರೆ.
ಈ ಸ್ಥಳಗಳಲ್ಲಿ, ಮದ್ಯ ಸೇವಿಸಿದವರು ಸಹಜ ಸ್ಥಿತಿಗೆ ಬರುವವರೆಗೆ ಅವರನ್ನಿರಿಸಲಾಗುತ್ತದೆ. ನಂತರ ಅವರ ವಿಳಾಸ ಪಡೆದು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಅತಿ ಮುಖ್ಯವಾಗಿದೆ. ಯಾರು ಕೂಡ ಈ ಸನ್ನಿವೇಶದ ದುರುಪಯೋಗ ಪಡಿಸಿಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ : ಗೋವಾದಲ್ಲಿ ಬಿಯರ್ ಬಾಟಲ್ ಹಿಡ್ಕೊಂಡು ಸಾರಾ ತೆಂಡೂಲ್ಕರ್ ರೌಂಡ್ಸ್ | ಪರ-ವಿರೋಧ ಚರ್ಚೆ!


















