ಬೆಂಗಳೂರು: ಈ ವರ್ಷ ಪೂರ್ವ ಮುಂಗಾರು ಮಳೆ ಭರ್ಜರಿಯಾಗಿ ರಾಜ್ಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 11 ಹಾಗೂ 12 ರಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಬಂಗಾಳ ಉಪಸಾಗರದಲ್ಲಿ ಸರ್ಕ್ಯುಲೇಷನ್ ಉಂಟಾದ ಹಿನ್ನೆಲೆಯಲ್ಲಿ ಮುಂಗಾರು ಪೂರ್ವ ಮಳೆ ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ಹೀಗಾಗಿ ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ ಹಾಗೂ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಾರ್ಚ್ 11 ಹಾಗೂ 12 ರಂದು ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲಿನ ತಾಪದಿಂದ ಕಂಗೆಡುತ್ತಿರುವ ಜನರಿಗೆ ಇದು ಸಿಹಿ ಸುದ್ದಿ ನೀಡಿದಂತಾಗುತ್ತಿದೆ.
ಉತ್ತರ ಕರ್ನಾಟಕಕ್ಕೆ ಇಲ್ಲ ಮುನ್ಸೂಚನೆ
ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಮಾ 9 ರಿಂದ 15 ರ ವರೆಗೆ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶ 37 ರಿಂದ 38 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.