ಹಾಸನ: ಹಾಸನಾಂಬ ದರ್ಶನಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಮುಂದಿನವಾರ ದೇವಾಲಯದ ದ್ವಾರ ಬಾಗಿಲು ತೆರೆಯಲಿದ್ದು, ಹಾಸನಾಂಬೆ ದರ್ಶನ ನೀಡಲಿದ್ದಾಳೆ.
ವರ್ಷಕ್ಕೊಮ್ಮೆ ದರ್ಶನದ ಭಾಗ್ಯ ನೀಡುವ ಶಕ್ತಿ ಸ್ವರೂಪಿಣಿಯಾದ ಶ್ರೀ ಹಾಸನಾಂಬ ದೇವಿಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ನಡೆಸುತ್ತಿದೆ.
ಇದೇ ಗುರುವಾರ, ಅ 9, 2025 ರಂದು ಮಧ್ಯಾಹ್ನ 12:30ಕ್ಕೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಜಿಲ್ಲಾಡಳಿತವು ಎಲ್ಲಾ ಸಿದ್ಧತೆಯಲ್ಲಿ ತೊಡಗಿದೆ. ಈ ವರ್ಷದ ಜಾತ್ರಾ ಮಹೋತ್ಸವವು ಅ.9 ರಿಂದ 23 ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಅ. 10 ರಿಂದ 22 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ, ಮೊದಲ ದಿನ (ಅ. 9) ಮತ್ತು ಕೊನೆಯ ದಿನ (ಅ. 23) ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಈ ಬಾರಿಯ ಜಾತ್ರೆಯನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಭಕ್ತರ ಸುಗಮ ದರ್ಶನಕ್ಕಾಗಿ ಬ್ಯಾರಿಕೇಡ್, ಸರತಿ ಸಾಲು ವ್ಯವಸ್ಥೆ, ಜರ್ಮನ್ ಟೆಂಟ್‌ಗಳ ಸ್ಥಾಪನೆ, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ವಿದ್ಯುತ್ ದೀಪಾಲಂಕಾರ ಮತ್ತು ಇತರ ಅಗತ್ಯ ಕಾರ್ಯಗಳನ್ನು ತೀವ್ರಗೊಳಿಸಲಾಗಿದೆ.