ಕೊಡಗು : ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದ್ದು, ಸಹಸ್ರಾರು ಭಕ್ತರು ಆ ಪುಣ್ಯಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇದರ ಅಂಗವಾಗಿ ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ದಕ್ಷಿಣ ಭಾರತದ ಗಂಗೆ ಅಂತಲೇ ಪೂಜಿಸಲ್ಪಡುವ ಕನ್ನಡ ನಾಡಿನ ಜೀವ ನದಿ ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರದಲ್ಲಿ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯದಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದು, ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲ ಸಕಲ ರೀತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಹೆಚ್ಚು ಜನರು ಬರುತ್ತಿರುವ ಕಾರಣ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ಹಾಗೂ ಸಿಸಿ ಕ್ಯಾಮರಾಗಳ ವ್ಯವಸ್ಥೆ ಮಾಡಲಾಗಿದೆ.
ಇಂದು ಮಧ್ಯಾಹ್ನ 1:44 ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋಧ್ಭವ ಜರುಗಲಿದ್ದು, ಮುಂಜಾನೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಅರ್ಚಕರ ತಂಡ ಕೂಡ ಕಾವೇರಿಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗರೆಡ್ಡಿ ತಲಕಾವೇರಿ ಭೇಟಿ ರದ್ದು | ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಕಷ್ಟ ಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೊನೇ ಕ್ಷಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗರೆಡ್ಡಿ ತಲಕಾವೇರಿ ಭೇಟಿಯನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆ ಕಾವೇರಿ ಭಕ್ತರಿಗೆ ಶುಭ ಹಾರೈಸಿದ ಸಚಿವರು, ಕಾವೇರಿ ಮಾತೆ ಎಲ್ಲಾ ಭಕ್ತರಿಗೂ ಒಳಿತುಂಟು ಮಾಡಲಿ ಹೇಳಿದ್ದಾರೆ.