ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಮರಳಲು ಕ್ಷಣಗಣನೆ ಆರಂಭವಾಗಿದೆ. ಇವರನ್ನು ಹೊತ್ತ ಡ್ರ್ಯಾಗನ್ ಕ್ಯಾಪ್ಸೂಲ್ ಇಂದು (ಸೋಮವಾರ) ಮಧ್ಯಾಹ್ನ ಭಾರತೀಯ ಕಾಲಮಾನ 4:35ಕ್ಕೆ ಐಎಸ್ಎಸ್ ನಿಂದ ಹೊರಡಲಿದ್ದು, ಸುಮಾರು 22.5 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ಜುಲೈ 15ರ ಮಂಗಳವಾರ ಸಂಜೆ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸುರಕ್ಷಿತವಾಗಿ ಸಮುದ್ರಕ್ಕೆ ಇಳಿಯಲಿದೆ.
ಈ ನಾಲ್ಕು ಸದಸ್ಯರ ತಂಡ ಬಾಹ್ಯಾಕಾಶ ನಿಲ್ದಾಣದಲ್ಲಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಕಳೆದಿದ್ದು, ನಾಸಾ ಉಪಕರಣಗಳು ಮತ್ತು ಇಸ್ರೋ ಆಯ್ಕೆ ಮಾಡಿದ ಏಳು ಪ್ರಯೋಗಗಳು ಸೇರಿದಂತೆ 580 ಪೌಂಡ್‌ಗಳಿಗಿಂತ ಹೆಚ್ಚು ಸರಕು ಮತ್ತು ಒಟ್ಟು 60ಕ್ಕೂ ಹೆಚ್ಚು ಪ್ರಯೋಗಗಳ ದತ್ತಾಂಶವನ್ನು ಮರಳಿ ತರಲಿದೆ.
ಭಾನುವಾರ ಸಂಜೆ ಈ ಗಗನಯಾನಿಗಳಿಗಾಗಿ ಹೃದಯಸ್ಪರ್ಶಿ ವಿದಾಯ ಸಮಾರಂಭವೂ ನಡೆದಿದೆ. ಶುಭಾಂಶು ಅವರು ಭಾವುಕರಾಗಿ 1984ರಲ್ಲಿ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರು ಭೂಮಿಯಿಂದ ಭಾರತವನ್ನು ‘ಸಾರೆ ಜಹಾನ್ ಸೇ ಅಚ್ಛಾ’ ಎಂದು ವರ್ಣಿಸಿದ್ದನ್ನು ನೆನಪಿಸಿಕೊಂಡು, ಈಗಲೂ ಭಾರತ ಸಾರೆ ಜಹಾನ್ ಸೇ ಅಚ್ಛಾ ಎಂದು ಮನದುಂಬಿ ಹೇಳಿದ್ದಾರೆ.

22.5 ಗಂಟೆಗಳ ಸುದೀರ್ಘ ಪ್ರಯಾಣ ಏಕೆ?
ಡ್ರ್ಯಾಗನ್ ಕ್ಯಾಪ್ಸೂಲ್ ಐಎಸ್ಎಸ್ ನಿಂದ ಹೊರಟು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯಲು ಸುಮಾರು 22.5 ಗಂಟೆಗಳ ಸಮಯ ಬೇಕಾಗಲಿದೆ. ನಾಸಾ ಮಾಹಿತಿ ಪ್ರಕಾರ, ಕ್ಯಾಪ್ಸೂಲ್‌ನ ಹ್ಯಾಚ್(ಬಾಗಿಲು) ಮುಚ್ಚುವಿಕೆಯು ಸೋಮವಾರ ಮಧ್ಯಾಹ್ನ ಭಾರತೀಯ ಕಾಲಮಾನ 2:00 ಕ್ಕೆ ಪ್ರಾರಂಭವಾಗುತ್ತದೆ. ಎಲ್ಲಾ ನಿರ್ಗಮನ ಪೂರ್ವ ಪರಿಶೀಲನೆಗಳು ಪೂರ್ಣಗೊಂಡ ನಂತರ, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸೂಲ್ ಐಎಸ್ಎಸ್‌ನ ಹಾರ್ಮನಿ ಮಾಡ್ಯೂಲ್‌ನಿಂದ 4:35 ಕ್ಕೆ ಹೊರಡಲಿದೆ.
ಈ ಸಂಪೂರ್ಣ ಕಾರ್ಯಾಚರಣೆ ಸ್ವಯಂಚಾಲಿತವಾಗಿರುತ್ತದೆ. ಆದರೂ ಮತ್ತೆ ಭೂಮಿಗೆ ಪ್ರವೇಶಿಸಲು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಇದೆಯೇ ಇಲ್ಲವೇ ಎನ್ನುವುದರ ಮೇಲೆ ನಿರ್ಗಮನದ ಸಮಯ ಅವಲಂಬಿಸಲ್ಪಟ್ಟಿರುತ್ತದೆ.
ಡ್ರ್ಯಾಗನ್, ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿ ಐಎಸ್ಎಸ್ ಸುತ್ತ ಸುತ್ತುತ್ತಿರುವುದರಿಂದ, ತನ್ನ ಕಕ್ಷೆಯನ್ನು ಕಡಿಮೆ ಮಾಡಲು ಸರಣಿ ಚಲನೆಗಳನ್ನು ಕೈಗೊಳ್ಳಲಿದೆ. ಇದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಕಕ್ಷೀಯ ಕುಶಲತೆ, ಡಿ-ಆರ್ಬಿಟ್ ಬರ್ನ್ (ಕಕ್ಷೆ ಇಳಿಸುವಿಕೆಗಾಗಿ ಇಂಧನ ಸುಡುವಿಕೆ) ಮತ್ತು ಕಕ್ಷೆಯನ್ನು ಕಡಿಮೆ ಮಾಡುವಂತಹ ಯೋಜಿತ ಹಂತಗಳನ್ನು ಒಳಗೊಂಡಿರುತ್ತದೆ. ಇದು ಪ್ಯಾರಾಚೂಟ್‌ಗಳ ನಿಯೋಜನೆ ಮತ್ತು ಸಮುದ್ರದಲ್ಲಿ ನಿಖರವಾದ ಇಳಿಯುವಿಕೆಗೆ ಸಹಾಯ ಮಾಡುತ್ತದೆ.
ಸಮುದ್ರಕ್ಕಿಳಿದ ನಂತರ ಮುಂದೇನು?
ನೆಲದ ನಿಯಂತ್ರಣ ಕೇಂದ್ರಗಳಿಂದ ಅನುಮತಿ ಪಡೆದ ನಂತರ ಮತ್ತು ರಕ್ಷಣಾ ತಂಡಗಳು ಸಿದ್ಧವಾದ ಬಳಿಕ ಭೂಮಿಗೆ ಮರಳುವ ಅಂತಿಮ ಹಂತ ಪ್ರಾರಂಭವಾಗುತ್ತದೆ. ಕೆಲವೇ ನಿಮಿಷಗಳಲ್ಲಿ, ದೋಣಿಗಳು ಗಗನಯಾತ್ರಿಗಳನ್ನು ಸ್ಥಳಾಂತರಿಸಲು ಮತ್ತು ಅವರನ್ನು ನೆಲದ ಮೂಲ ಶಿಬಿರಕ್ಕೆ ಕರೆದೊಯ್ಯಲು ಆರಂಭಿಸುತ್ತವೆ. ಸಿಬ್ಬಂದಿ ಸುಮಾರು ಹತ್ತು ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಉಳಿಯುವ ಸಾಧ್ಯತೆಯಿದೆ, ಭೂಮಿಯ ಗುರುತ್ವಾಕರ್ಷಣೆಗೆ ತಮ್ಮ ದೇಹವನ್ನು ಹೊಂದಿಕೊಳ್ಳುವಂತೆ ಮಾಡಲು ಇದು ಸಹಾಯಕವಾಗಲಿದೆ.
ಇದಕ್ಕೆ ಮುಂಚಿತವಾಗಿ, ಪ್ರಾಥಮಿಕ ವೈದ್ಯಕೀಯ ತಪಾಸಣೆಗಳು ಮತ್ತು ಮೂಲಭೂತ ಆರೋಗ್ಯ ಮೌಲ್ಯಮಾಪನಗಳು ನಡೆಯುತ್ತವೆ. ಇವುಗಳು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಆರೋಗ್ಯದ ಮೇಲೆ ವಿಜ್ಞಾನಿಗಳು ನಡೆಸುತ್ತಿರುವ ದೀರ್ಘಾವಧಿಯ ಅಧ್ಯಯನಗಳಿಗೆ ಮಹತ್ವದ್ದಾಗಿವೆ.
ಈ ನಾಲ್ಕು ಸದಸ್ಯರ ಆಕ್ಸಿಯಂ-4 ಮಿಷನ್ ಅನ್ನು ಮಾಜಿ ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ಮುನ್ನಡೆಸಿದ್ದರು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರೆ, ಪೋಲೆಂಡ್‌ನ ಸ್ಲಾವೋಸ್ ಉಜನಾನ್ಸ್ಕಿ ಮತ್ತು ಹಂಗರಿಯ ಟಿಬರ್ ಕಪು ಎಂಬ ಇಬ್ಬರು ಮಿಷನ್ ಸ್ಪೆಷಲಿಸ್ಟ್‌ಗಳಿದ್ದರು. ಈ ಖಾಸಗಿ ಬಾಹ್ಯಾಕಾಶ ಯಾನಕ್ಕೆ ಇಸ್ರೋ 550 ಕೋಟಿ ರೂ. ಹೂಡಿಕೆ ಮಾಡಿದೆ.