ನವದೆಹಲಿ: ನವೀಕರಿಸಬಹುದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದ್ದರ ಫಲವಾಗಿ 4 ಲಕ್ಷ ಕೋಟಿ ರೂ. ವೆಚ್ಚ ಉಳಿತಾಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
`ಮೆರ್ಕಾಮ್ ಇಂಡಿಯಾ’ ನವೀಕರಿಸಬಹುದಾದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೋಶಿ, ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಮಾತ್ರವಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ. ಈ ಮೂಲಕ ಸುಮಾರು 4 ಲಕ್ಷ ಕೋಟಿ ರೂ. ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದವರು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಅಧ್ಯಯನ ಹೇಳುವ ಪ್ರಕಾರ ನವೀಕರಿಸಬಹುದಾದ ಇಂಧನದಿಂದಾಗಿ ರಾಷ್ಟ್ರದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಿದೆ. 410.9 ಮಿಲಿಯನ್ ಟನ್ CO₂ ಹೊರಸೂಸುವಿಕೆ ಕೂಡ ಕಡಿಮೆಯಾಗಿದೆ ಹಾಗೂ 31.7 ಬಿಲಿಯನ್ ಡಾಲರ್ ಮೌಲ್ಯದಷ್ಟು ಆರೋಗ್ಯ ಹಾಗೂ ವಾಯುಮಾಲಿನ್ಯದಿಂದ ಪ್ರಯೋಜನವಾಗಿದೆ ಎಂದವರು ಹೇಳಿದ್ದಾರೆ.
2030ರ ಹೊತ್ತಿಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಗ್ರ ಪ್ರಸರಣ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ವಿದ್ಯುತ್ ಸಚಿವಾಲಯ, ಸಿಇಎ, ಸಿಟಿ ಹಾಗೂ ಪವರ್‌ಗ್ರಿಡ್‌ನೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಿಕೊಳ್ಳಲಾಗಿದೆ. 24,000 ಕೋಟಿ ರೂ. ವೆಚ್ಚದ `ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ’ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನುವು ಮಾಡಿಕೊಡಲಿದೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ.



















