ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಅನ್ನೋದು ಹಾಸು ಹೊದ್ದಾಗಿದೆ. ಅಬಕಾರಿ, ಸಾರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಪೊಲೀಸ್ ಸೇರಿ ಹಲವು ಇಲಾಖೆಗಳಲ್ಲಿ ಲಂಚಾವತಾರ ಖುಲ್ಲಾಂಖುಲ್ಲಾ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಾಗೂ ಲೋಕಾಯುಕ್ತದ ಭಯವೇ ಇಲ್ಲದಂತಾಗಿದೆ.

ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರದಲ್ಲಿ ಭ್ರಷ್ಟಚಾರ ಹೆಚ್ಚಾಗಿರುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಹೌದು.. ಉದ್ಯಮಿ ಮೋಹನ್ ದಾಸ್ ಪೈ ಮಾಡಿರುವ ಟ್ವೀಟ್ ವಿಪಕ್ಷಗಳ ಬಾಯಿಗೆ ಆಹಾರವಾಗಿದ್ದು, ರಾಜ್ಯದ 12 ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಬಗ್ಗೆ ಮೋಹನ್ ದಾಸ್ ಪೈ ಪೋಸ್ಟ್ ಹಂಚಿಕೊಂಡು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಭ್ರಷ್ಟಾಷಾರ ಮಾಡೋದಿಲ್ಲ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ, ಮಾಡಲ್ಲ ಮಾಡಲ್ಲ ಅಂತಾನೇ ಭ್ರಷ್ಟಾಷಾರದಲ್ಲಿ ಮುಳುಗ್ತಾ ಎಂಬ ಚರ್ಚೆಗಳು ಮತ್ತೆ ಶುರುವಾಗಿದೆ.
ಮೋಹನ್ ದಾಸ್ ಪೈ ಟ್ವೀಟ್‌ನಲ್ಲೇನಿದೆ? ನಮ್ಮ @CMofKarnataka @siddaramaiah ಅವರು ಕರ್ನಾಟಕದಲ್ಲಿ ಅತಿಯಾಗಿ ವ್ಯಾಪಿಸಿರುವ ಭ್ರಷ್ಟಾಚಾರದಿಂದ ನಮ್ಮನ್ನು ಹೇಗೆ ರಕ್ಷಿಸುತ್ತಾರೆ. ಸಮಾಜವಾದವೂ ಭ್ರಷ್ಟಾಚಾರದ ಮಟ್ಟಕ್ಕೆ ಏರಿದೆಯೇ? ಸಮಾಜವಾದಿಗಳು ಮತ್ತು ಬಡವರ ರಕ್ಷಕರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ನಮ್ಮ ನಾಯಕರು ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸರ್ ದಯವಿಟ್ಟು ಇಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್‌ನಲ್ಲಿ ಸರ್ಕಾರದ ವಾಸ್ತವಾಂಶ ಬಯಲು – ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ?
- ಅಬಕಾರಿ ಅಧಿಕಾರಿಗಳು 38% ಭ್ರಷ್ಟಾಚಾರದಲ್ಲಿ ಭಾಗಿ.
- ಇಂಧನ ಇಲಾಖೆ ಅಧಿಕಾರಿಗಳು 41% ಭ್ರಷ್ಟಾಚಾರದಲ್ಲಿ ಭಾಗಿ.
- ಸಾರಿಗೆ ಇಲಾಖೆ ಅಧಿಕಾರಿಗಳು 42 % ಭ್ರಷ್ಟಾಚಾರದಲ್ಲಿ ಭಾಗಿ.
- ಪೊಲೀಸ್ ಅಧಿಕಾರಿಗಳು 43% ಭ್ರಷ್ಟಾಚಾರದಲ್ಲಿ ಭಾಗಿ.
- ಅಗ್ನಿ ಶಾಮಕ ದಳದ ಅಧಿಕಾರಿಗಳು 45% ಭ್ರಷ್ಟಾಚಾರದಲ್ಲಿ ಭಾಗಿ.
- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 47% ಭ್ರಷ್ಟಾಚಾರದಲ್ಲಿ ಭಾಗಿ.
- ಮಹಾನಗರ ಪಾಲಿಕೆ ಅಧಿಕಾರಿಗಳು 57% ಭ್ರಷ್ಟಾಚಾರದಲ್ಲಿ ಭಾಗಿ
- ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು 59% ಭ್ರಷ್ಟಾಚಾರದಲ್ಲಿ ಭಾಗಿ
- ಜಿಎಸ್ ಟಿ ಅಧಿಕಾರಿಗಳು 62% ಭ್ರಷ್ಟಾಚಾರದಲ್ಲಿ ಭಾಗಿ
- ನೋಂದಣಿ ಇಲಾಖೆ ಅಧಿಕಾರಿಗಳು 68% ಭ್ರಷ್ಟಾಚಾರದಲ್ಲಿ ಭಾಗಿ
- ಕಾರ್ಮಿಕ/ ಪಿಎಫ್ ಕಚೇರಿ ಅಧಿಕಾರಿಗಳು 69% ಭ್ರಷ್ಟಾಚಾರದಲ್ಲಿ ಭಾಗಿ
- ಇತರ ಇಲಾಖೆಗಳು( ಆಹಾರ, ಔಷಧಿ, ಆರೋಗ್ಯ ಸೇರಿದಂತೆ ಇತರೆ) 75% ಭ್ರಷ್ಟಾಚಾರದಲ್ಲಿ ಭಾಗಿ



















