ಬಳ್ಳಾರಿ: ಸಿಎಂ ಆಗಿದ್ದ ವೇಳೆ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸತ್ತ ಹೆಣಗಳ ಮೇಲೆ ರಾಮುಲು ಹಾಗೂ ಯಡಿಯೂರಪ್ಪ ಲೂಟಿ ಮಾಡಿದ್ದಾರೆ. ಅವರನ್ನು ಯಾವ ದೇವರೂ ಕ್ಷಮಿಸುವುದಿಲ್ಲ. ನೀವು ಕ್ಷಮಿಸಬೇಡಿ ಎಂದು ಮತದಾರರಿಗೆ ಹೇಳಿದ್ದಾರೆ.
ಬಿಜೆಪಿ ಯಾವಾಗಲೂ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಅವರಿಗೆ ಜನರ ಅಭಿವೃದ್ಧಿ ಬೇಕಿಲ್ಲ. ಬರೀ ರಾಜಕಾರಣ ಬೇಕು ಎಂದು ಗುಡುಗಿದ್ದಾರೆ.
ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ಮಾಡಿದ್ದಾರೆ. ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಿ ಎಂದು ನ್ಯಾ.ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ. ಹಿಂದೆ ಜನಾರ್ದನರೆಡ್ಡಿಯವರ ಟೀಮು ನಡೆಸಿದ್ದ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆ ಬಯಲಿಗೆ ಎಳೆದಿದ್ದರು. ಬಿಜೆಪಿಯವರ ಅಜೆಂಡಾವೇ ಭ್ರಷ್ಟಾಚಾರ ಎಂದು ಗುಡುಗಿದ್ದಾರೆ.