ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸೇರಿದಂತೆ ಹಲವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದೆ.
ಈ ವೇಳೆ ಅಧಿಕಾರಿ ಕೋರ್ಟ್ ನೀಡಿದ್ದ ಶೋಕಾಸ್ ನೋಟಿಸ್‌ಗೆ ವಿವರಣೆ ಸಲ್ಲಿಸಿದ್ದಾರೆ. ಆದರೆ, ಸರಿಯಾದ ತನಿಖಾ ಪ್ರಗತಿ ವಿವರವನ್ನು ಸಲ್ಲಿಸದ್ದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ. 2 ವರ್ಷಗಳಾದರೂ ಪೊಲೀಸರು ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಕೋರ್ಟ್ ಛಿಮಾರಿ ಹಾಕಿದೆ. ಪ್ರತಿ ಬಾರಿಯೂ ಶೆಲ್ ಕಂಪನಿಗಳ ಬಗ್ಗೆ ತನಿಖೆ ನಡೆಸಿರುವುದಾಗಿ ಮಾತ್ರವೇ ಮಾಹಿತಿ ನೀಡಲಾಗಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಲೋಕಾಯುಕ್ತ ಎಸ್‌ಪಿ, ತನಿಖಾಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಬಿಡಿಎ ಅಪಾರ್ಟ್‌ಮೆಂಟ್ ಟೆಂಡರ್‌ನಲ್ಲಿ ಸುಮಾರು 8 ಕೋಟಿ 41 ಲಕ್ಷ ರೂ. ಹಣ ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ ಕಂಪನಿಗೆ ವರ್ಗಾವಣೆ ಆರೋಪ ಕೇಳಿ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಂ, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರೂಪಾಕ್ಷಪ್ಪ ಯಮಕನಮರಡಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಖಾಸಗಿ ದೂರು ಸಲ್ಲಿಸಿದ್ದರು. ಸದ್ಯ ಪ್ರಕರಣದ ತನಿಖೆ ನಿಧನವಾಗಿದ್ದರಿಂದ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.