ಕಾರವಾರ: ಭ್ರಷ್ಟಾಚಾರವೊಂದರ ಪ್ರಕರಣದಲ್ಲಿ ಬಿಜೆಪಿ ನಾಯಕಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿರಸಿ (Sirsi) ಗ್ರಾಮೀಣ ಬಿಜೆಪಿ (BJP) ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ (Uttara Kannada) ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆಗೆ (Usha Hegde) ಕಾರವಾರದ ಲೋಕಾಯುಕ್ತ ನ್ಯಾಯಾಲಯ (Lokayuktha Court) ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಶ್ರೀನಗರ ಪಂಚಾಯತ್ ವತಿಯಿಂದ ನಡೆದಿದ್ದ ಸಮಾರಂಭಗಳಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಜರಾಗಿದ್ದರು.
ಜಿ.ಪಂ.ಸದಸ್ಯತ್ವದ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ 88,630 ರೂ. ಪಡೆದುಕೊಂಡಿದ್ದಾರೆ. ಒಟ್ಟು ಎರಡು ಹುದ್ದೆಗಳನ್ನು ಹೊಂದಿದ್ದು, ಜನಪ್ರತಿನಿಧಿಯಾದ ನಂತರವೂ ಅಂಗನವಾಡಿ ಕಾರ್ಯಕರ್ತೆಯೆಂದು ಗೌರವಧನ ಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಮೋಸ ಮಾಡಿದ್ದಾರೆಂದು ಆರೋಪ ಕೇಳಿ ಬಂದಿತ್ತು.
ಜಿಪಂ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೆ ಹಾಗೂ ಅಂಗನವಾಡಿ ಕರ್ತವ್ಯವನ್ನೂ ಸರಿಯಾಗಿ ನಿಭಾಯಿಸಿಲ್ಲ ಎನ್ನಲಾಗಿದೆ. ಹೀಗಾಗಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.