ದೇವಿಯ ಸೀರೆಯನ್ನೂ ಭ್ರಷ್ಟ ಅಧಿಕಾರಿಗಳು ಮಾರಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ದೇವಿಗೆ ಉಡುಗೊರೆಯಾಗಿ ಬಂದಿದ್ದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಅವರ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಕಾರಿನಲ್ಲಿ ಸೀರೆ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೆ.ಆರ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ.
ಚಾಮುಂಡೇಶ್ವರಿ ಅಮ್ಮನವರಿಗೆ ನೀಡುವ ಲಕ್ಷಾಂತರ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಸೀರೆಗಳನ್ನು ನೌಕರರ ಮೂಲಕ ಕಳ್ಳತನ ಮಾಡುತ್ತಿರುವ ದೇವಸ್ಥಾನದ ಕಾರ್ಯದರ್ಶಿ ರೂಪ, ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮಾರಾಟ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಸರ್ಕಾರಕ್ಕೆ ವಂಚಿಸುವ ಮೂಲಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ದೇವಸ್ಥಾನದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನಗೆ ಇತ್ತೀಚೆಗೆ ದೊರೆತಿರುವ ಎರಡು ವಿಡಿಯೋಗಳನ್ನು “ಚಾಮುಂಡಿ ಬೆಟ್ಟ” ಎಂದು ಬರೆದಿರುವ ಸಿ.ಡಿ.ಯಲ್ಲಿ ಹಾಕಿ ಈ ದೂರರ್ಜಿಯೊಂದಿಗೆ ಲಗತ್ತಿಸಿರುತ್ತೇನೆ. ಆ ಎರಡು ವೀಡಿಯೋಗಳನ್ನು ವೀಕ್ಷಿಸಿದಾಗ, ಒಂದು ವಿಡಿಯೋದಲ್ಲಿ, ಹಸಿರು ಬಣ್ಣದ ಬಟ್ಟೆಯೊಂದರಲ್ಲಿ ಸೀರೆಗಳನ್ನು ತೆಗೆದುಕೊಂಡು ಯುವಕ ಬಂದು, ದೇವಸ್ಥಾನದ ಕಚೇರಿಗೆ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ಭಕ್ತರು ದೇವಸ್ಥಾನಕ್ಕೆ ನೀಡಿದ ಸೀರೆಗಳು ಎಷ್ಟು? ಅವುಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರಕ್ಕೆ ನೀಡಿರುತ್ತಾರೆಯೆ? ಎಂಬ ಕುರಿತು ತನಿಖೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.