ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Development Corporation scam) ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಗೆ ವಿಶೇಷ ತನಿಖಾ ತಂಡದಿಂದ ನೋಟಿಸ್ ನೀಡಲಾಗಿದ್ದು, ಸಂಕಷ್ಟ ಶುರುವಾಗಿದೆ.
ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮತ್ತು ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದರು. ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ನಂತರ ಎಸ್ ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ಮಾಡಿರಲಿಲ್ಲ. ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಈಗ ನೋಟಿಸ್ ಜಾರಿಯಾಗಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ಚುರುಕುಗೊಂಡಿದೆ. ಒಂದು ಕಡೆ ಎಸ್ಐಟಿ ತನಿಖೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಸಿಬಿಐ ಕೂಡ ಚಾರ್ಜ್ ತೆಗೆದುಕೊಂಡು ತನಿಖೆ ಕೈಗೆತ್ತಿಕೊಂಡಿತ್ತು. ಈಗಾಗಲೇ ಎಸ್ಐಟಿ ಅಧಿಕಾರಿಗಳು ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಕಾಂಗ್ರೆಸ್ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಇತ್ತೀಚೆಗೆ ಈ ಹಗರಣದಲ್ಲಿ ಅಂತರರಾಜ್ಯ ಜಾಲಗಳಿವೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದ್ದರು. ಸಿಬಿಐ ಹಾಗೂ ಎಸ್ಐಟಿ ಜಿತೆ ಇಡಿ ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ದದ್ದಲ್ ಹೇಳಿದ್ದರು. ಈಗ ಅವರಿಗೆ ನೋಟಿಸ್ ನೀಡಿದ್ದು, ಅವರಿಗೂ ಸಂಕಷ್ಟ ಶುರುವಾಗಿದೆ.