ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಠಾಣೆಗಳನ್ನು ಮಹಿಳಾ ಸ್ನೇಹಿ ಠಾಣೆಗಳಾಗಿ ಪರಿವರ್ತಿಸುವುದರೊಂದಿಗೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ದೃಷ್ಟಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದ್ದಾರೆ.
ಶಾಸಕರ ಭವನ-5ರ ಸಮ್ಮೇಳನ ಸಭಾಂಗಣದಲ್ಲಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಹಿಳೆಯರ ಸಮಸ್ಯೆಗಳು, ಪರಿಹಾರ ಹಾಗೂ ಮಹಿಳಾ ಸಬಲೀಕರಣದ ಸಾಧ್ಯತೆ ಮೊದಲಾದ ವಿಷಯಗಳ ಮೇಲೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಸಲಹೆಗಳನ್ನು ಪಡೆದರು.
ರಾಜ್ಯದಲ್ಲಿರುವ ಪೊಲೀಸ್ ಠಾಣೆಗಳನ್ನು ಮಹಿಳಾ ಸ್ನೇಹಿ ಠಾಣೆಗಳಾಗಿ ಪರಿವರ್ತಿಸಬೇಕು, ಈ ದೃಷ್ಟಿಯಲ್ಲಿ ಪೊಲೀಸ್ ಅಧಿಕಾರಿ, ಸರ್ಕಾರಿ ವಕೀಲರಿಗೆ ಅರಿವು ಮೂಡಿಸಬೇಕು. ಮಹಿಳಾ ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸುವುದರೊಂದಿಗೆ ಮಹಿಳಾ ಗ್ರಾಮ ಸಭೆಗಳನ್ನು ನಡೆಸಲು ಮಹಿಳಾ ಆಯೋಗ ಸೂಚನೆ ನೀಡಬೇಕು ಎಂದು ಮಹಿಳಾ ಹೋರಾಟಗಾರು ಆಗ್ರಹಿಸಿದ್ದಾರೆ.
ಸರ್ಕಾರಿ ಕಚೇರಿ ಮತ್ತು ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಿಳಾ ದೌರ್ಜನ್ಯ, ಅಪಹರಣ, ಹತ್ಯೆಗಳಂತಹ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಗ್ರಾಮಮಟ್ಟದಲ್ಲಿ ಪಂಚಾಯತ್ ಕಾವಲು ಸಮಿತಿಗಳನ್ನು ಬಲಪಡಿಸಿ ಇವುಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಭ್ರೂಣ ಹತ್ಯೆ, ಬಾಲ್ಯವಿವಾಹ ತಡೆಗೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲೈಂಗಿಕ ಅಲ್ಪಸಂಖ್ಯಾಕರಿಗೆ ಘನತೆಯ ಬದುಕನ್ನು ರೂಪಿಸಿಕೊಡುವುದರ ಜತೆಗೆ ಆದಿವಾಸಿ ಮಹಿಳೆಯರಿಗೆ ಆರೋಗ್ಯ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಕೆಲವು ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮೂಢನಂಬಿಕೆ ಚಾಲ್ತಿಯಲ್ಲಿದೆ ಹೋಗಲಾಡಿಸಿ ಅರಿವು ಮೂಡಿಸಬೇಕು. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟೆಗೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.



















