ಶಾಸಕರು, ಸಚಿವರ ಆಪ್ತರ ದರ್ಪ, ಲಂಚಾವತಾರ, ಬಾಕಿ ಬಿಲ್ ಪಾವತಿಗೆ ವಿಳಂಬ ಸೇರಿ ಹತ್ತಾರು ಕಾರಣಗಳಿಂದಾಗಿ ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಬೀದರ್ ಜಿಲ್ಲೆಯಲ್ಲಿ ಡೆತ್ ನೋಟ್ ಬರೆದಿಟ್ಟು 26 ವರ್ಷದ ಗುತ್ತಿಗೆದಾರ ಸಚಿನ್ ಪಾಂಚಾಳ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ, ಸಚಿವ ಪ್ರಿಯಾಂಕ್ ಖರ್ಗೆ ಆಪ್ತನೇ ಜೀವ ಬೆದರಿಕೆ ಹಾಕಿದ ಕಾರಣ ಆತ್ಮಹತ್ಯಗೆ ಮುಂದಾಗಿದ್ದೇನೆ ಎಂದು ಸಚಿನ್ ಡೆತ್ ನೋಟ್ ಬರೆದಿಟ್ಟಿರುವುದು ಸಂಚಲನ ಮೂಡಿಸಿದೆ.
ಬೀದರ್-ಹೈದರಾಬಾದ್ ಮಾರ್ಗದಲ್ಲಿ ರೈಲು ಹಳಿಗೆ ತಲೆಕೊಟ್ಟು ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಬರೆದ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ, ಅವರ ಆಪ್ತ ರಾಜು ಕಪನೂರ್ ಸೇರಿ ಹಲವರ ಹೆಸರು ಪ್ರಸ್ತಾಪಿಸಿದ್ದಾನೆ. ಟೆಂಡರ್ ಕೊಡಿಸುವುದಾಗಿ ಹಣ ಪಡೆದುಕೊಂಡು, ಹಣವೂ ನೀಡದೆ, ಟೆಂಡರ್ ಕೊಡಿಸದೆ ಸತಾಯಿಸಿದ್ದಾರೆ. ಹಣ ಕೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ ಎಂಬುದನ್ನು ಸೇರಿದಂತೆ ಹಲವು ವಿಷಯಗಳನ್ನು ಮೃತ ಸಚಿನ್ ಪ್ರಸ್ತಾಪಿಸಿದ್ದಾನೆ.
ಸಚಿನ್ ಪಾಂಚಾಳ ಡೆತ್ ನೋಟ್ ವಿಷಯಗಳ ಕುರಿತು ಪ್ರಿಯಾಂಕ್ ಖರ್ಗೆ ಹಾಗೂ ರಾಜು ಕಪನೂರ್ ಸ್ಪಷ್ಟನೆ ನೀಡಿದ್ದು, ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇನ್ನು, ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದ. ಮಗ ಕಾಣೆಯಾಗಿರುವ ಕುರಿತು ಸಚಿನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಕ್ರಮ ತೆಗೆದುಕೊಳ್ಳದ ಕಾರಣ ಸದ್ಯ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ರಾಜ್ಯದಲ್ಲಿ ದಿನೇದಿನೆ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆಯಾ ಸರ್ಕಾರದ ನೂರು ಸಬೂಬಿನ ಕಾರಣಕ್ಕೆ ಇಲಾಖೆಗಳಿಗೆ ಅನುದಾನದ ಕೊರತೆಯಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಆಗುತ್ತಿಲ್ಲ ಎಂಬುವುದು ಸದ್ಯದ ವಾಸ್ತವ. ಇನ್ನು ಅಧಿಕಾರಿಗಳು, ರಾಜಕಾರಣಿಗಳ ಬಾಲಬಡುಕರುಗಳು ತಮ್ಮ ಕಮಿಷನ್ ಗಾಗಿ ಗುತ್ತಿಗೆದಾರರಿಗೆ ತೊಂದರೆ ಮಾಡುತ್ತಿದ್ದಾರೆ. ಹಣ ನೀಡುವಂತೆ ಒತ್ತಡ, ಜೀವಬೆದರಿಕೆ ಸೇರಿ ಹಲವು ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ ಎಂಬುವುದು ಲೆಕ್ಕಾಚಾರ.
ಕಳೆದ ಮೇ ತಿಂಗಳಲ್ಲಷ್ಟೇ ದಾವಣಗೆರೆಯಲ್ಲಿ ಕೆ ಆರ್ ಐ ಡಿ ಎಲ್ ಗುತ್ತಿಗೆದಾರ ಪಿ ಎಸ್ ಗೌಡರ್ ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಾಕಿ ಬಿಲ್ ಪಾವತಿಸದೆ ಸತಾಯಿಸಿದ್ದಕ್ಕೆ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಬೆಳಗಾವಿಯಲ್ಲಿ ಡಿಸೆಂಬರ್ 26ರಂದು ಪೌರ ಕಾರ್ಮಿಕರ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಕಾಮಗಾರಿ ಬಿಲ್ ಪಾವತಿ ಮಾಡದ ಕಾರಣ ಸುಜಿತ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವ ಅತಂತ್ರ ಸ್ಥಿತಿ ಹೊರ ಹಾಕಿದ್ದರು.
ಅಸಲಿಗೆ ರಾಜ್ಯದಲ್ಲಿ ಇಂತಹ ಪ್ರಕರಣಗಳು ಸುದ್ದಿಯಾಗುತ್ತಲೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ದುಡ್ಡು ಚೆಲ್ಲಿ ಗೆದ್ದು ಬಂದು ಗದ್ದುಗೆ ಹಿಡಿದ ರಾಜಕಾರಣಗಳು ಚೆಲ್ಲಿದ್ದನ್ನು ಕಿತ್ತುಕೊಳ್ಳುವ ಭರದಲ್ಲಿ ಅನ್ಯಾಯವಾಗಿ ಹೆಣ ಕೆಡವುತ್ತಿದ್ದಾರೆ. ಒಂದಿಡಿ ಕುಟುಂಬ- ಕುಟುಂಬವನ್ನೇ ಬೀದಿಗಟ್ಟುತ್ತಿದ್ದಾರೆ. ಈ ಬಗ್ಗೆ ಘನ ಸರ್ಕಾರ ಕಣ್ತೆರೆಯ ಬೇಕಿದೆ. ಒತ್ತಡ, ಬೆದರಿಕೆ ಹಾಕುವವರ ಬಾಯಿಗೆ ಬೀಗ ಜಡಿಯಬೇಕಿದೆ…ನೆನೆಗುದಿಗೆ ಬಿದ್ದಂತಿರುವ ಬಿಲ್ಲುಗಳ ಪಾವತಿಗೆ ಶೀಘ್ರ ಕ್ರಮಕೈಗೊಳ್ಳಬೇಕಿದೆ.