ಗುತ್ತಿಗೆದಾರ ಸಚಿನ್ ಆತ್ಮಹತ್ಯೆ (Sachin Suicide Case) ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಈ ವಿಷಯ ಮುಂದಿಟ್ಟುಕೊಂಡು ಗುದ್ದಾಟ ನಡೆಸುತ್ತಿವೆ. ಪರಿಣಾಮ ಸಚಿನ್ ಕುಟುಂಬಸ್ಥರು ಮಾತ್ರ ಪರದಾಡುವಂತಾಗಿದೆ.
ಸಚಿನ್ ಗುತ್ತಿಗೆದಾರನೇ ಅಲ್ಲ ಎಂದು ಗುತ್ತಿಗೆದಾರರ ಸಂಘದ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿನ್ ಸಹೋದರಿ ಸುರೇಖಾ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಗುತ್ತಿಗೆದಾರ ಅಂತಾ ನಾವು ಯಾವತ್ತು ಹೇಳಿಕೊಂಡಿಲ್ಲ. ಲೈಸೆನ್ಸ್ ಇರುವ ಬಗ್ಗೆ ನಮಗೆ ಗೊತ್ತಿಲ್ಲ. ಡಾಕ್ಯುಮೆಂಟ್ಸ್ ಕಲಬುರಗಿ ಆಫೀಸ್ ನಲ್ಲಿದ್ದವು. ಈಗಾಗಲೇ ಕಲಬುರಗಿ ಕಚೇರಿಯಲ್ಲಿ ಎಲ್ಲ ದಾಖಲೆಗಳು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ. ಇವತ್ತು ಗುತ್ತಿಗೆದಾರನೇ ಇಲ್ಲ ಅಂತಾರೆ. ನಾಳೆ ಕಲಬುರಗಿ ಆಫೀಸ್ ಇಲ್ಲ ಅಂತಾರೆ. ಸಚಿನ್ ಹ್ಯಾಂಡ್ ರೈಟಿಂಗ್ ಅಲ್ಲ. ಸಚಿನ್ ಡೆಡ್ ಬಾಡಿನೇ ಇಲ್ಲ. ಸಚಿನ್ ಹುಟ್ಟೆ ಇಲ್ಲ ಎಂಬಂತೆ ಹುಟ್ಟಾಕಿ ಪ್ರಕರಣ ಸಾಯಿಸಿ ಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಸರ್ಕಾರದ ಮೇಲೆ ನಂಬಿಕೆ ಉಳಿದಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಈ ಪ್ರಕರಣದ ತನಿಖೆ ನಡೆಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ