ಚಿಕ್ಕಮಗಳೂರು: ರಾಜ್ಯದ ಹಲೆವೆಡೆ ಭಾರೀ ಮಳೆಯಾಗುತ್ತಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ಮಳೆಯ ಆರ್ಭಟ ಮುಂದುವರಿದಿದ್ದು, ಭದ್ರಾ ನದಿ (Bhadra River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇನ್ನೊಂದೆಡೆ ಕೊಗ್ರೆ-ಶೃಂಗೇರಿ ರಸ್ತೆ (Sringeri Road) ಸಂಪೂರ್ಣ ಜಲಾವೃತಗೊಂಡಿದ್ದು, ಕೊಗ್ರೆ ಹತ್ತಿರದ ಹುಲ್ಲಿನಗದ್ದೆ ಸೇತುವೆಗೂ ಜಲದಿಗ್ಭಂದನವಾಗಿದೆ. ಸೇತುವೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಪರದಾಡುವಂತಾಗಿದೆ.

ಶೃಂಗೇರಿ ಪಟ್ಟಣದ ಗಾಂಧಿ ಮೈದಾನ (Sringeri Gandhi Maidan) ಸಂಪೂರ್ಣ ಜಲಾವೃತಗೊಂಡಿದೆ. ಭದ್ರಾ ನದಿ ಅಬ್ಬರದಿಂದ ಕಳಸ ತಾಲೂಕಿನ ಹೊರನಾಡು ಸೇತುವೆ ಬಳಿಕ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು-ಕಳಸ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಘಟ್ಟ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಕೂಡ ಮೈದುಂಬಿ ಹರಿಯುತ್ತಿದೆ.