ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ಮುಂದುವರೆದಿದ್ದು, ಈಗ ಮತ್ತೊಂದು ಪಾರ್ಟಿ ಆಯೋಜನೆಗೊಂಡಿದೆ.
ಇತ್ತೀಚೆಗಷ್ಟೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿತ್ತು. ಹಲವಾರು ಸಚಿವರು, ಶಾಸಕರು ಈ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶದಲ್ಲಿ ಇದ್ದ ಸಂದರ್ಭದಲ್ಲೇ ಪಾರ್ಟಿ ಆಯೋಜಿಸಿದ್ದು, ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಈಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಔತಣಕೂಟ ಏರ್ಪಡಿಸಿದ್ದಾರೆ.
ಸಿಎಂ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ದಲಿತ ಶಾಸಕರು, ಮಾಜಿ ಶಾಸಕರು, ಸಚಿವರು, ಮಾಜಿ ಸಚಿವರನ್ನು ಡಿನ್ನರ್ ಗೆ ಆಹ್ವಾನಿಸಿದ್ದಾರೆ. ಜ. 8ರಂದು ಖಾಸಗಿ ಹೋಟೆಲ್ ನಲ್ಲಿ ಈ ಡಿನ್ನರ್ ಸಭೆ ನಡೆಯಲಿದೆ. ದಲಿತ ಶಾಸಕರನ್ನು ಒಟ್ಟುಗೂಡಿಸಿ ಪರಮೇಶ್ವರ್ ಬೆಂಬಲ ಕೇಳಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಶಾಸಕರು, ಸಚಿವರನ್ನು ಒಟ್ಟುಗೂಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರ ಮೂಲಕ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಗೃಹ ಸಚಿವ ಪರಮೇಶ್ವರ್, ಸತೀಶ್ ಜಾರಕಿಹೋಳಿ ನಿವಾಸದಲ್ಲಿ ನಡೆದಿದ್ದ ಡಿನ್ನರ್ ಸಭೆಯಲ್ಲೂ ಭಾಗವಹಿಸಿದ್ದರು.