ಬಳ್ಳಾರಿ: ರಾಜ್ಯದಲ್ಲಿ ಬಾಣಂತಿ ಸಾವಿನ ಸರಣಿ ಮುಂದುವರೆದಿದ್ದು, ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೊಮ್ಮೆ ಜಿಲ್ಲೆಯಲ್ಲೇ ಸಾವನ್ನಪ್ಪಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ್ದಾರೆ.
ವೈದ್ಯರ ನಿರ್ಲಕ್ಷ್ಯದ ಆರೋಪ
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ರೇಷ್ಮಾ ಬಿ (25) ಸಾವನ್ನಪ್ಪಿರುವ ಬಾಣಂತಿ. ರೇಷ್ಮಾ ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬಸ್ಥರು ಜ. 4ರಂದು ರೇಷ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಜ. 6ರಂದು ಸಿಜರೀನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಆ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಜ. 8ರಂದು ತಾಯಿ ಹಾಗೂ ಮಗುವನ್ನು ಡಿಸ್ಚಾರ್ಚ್ ಮಾಡಿದ್ದಾರೆ. ಮನೆಗೆ ಹೋದ ಮೇಲೆ ಒಂದೇ ವಾರದಲ್ಲಿ ರೇಷ್ಮಾಗೆ ಆಯಾಸ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.
28 ದಿನಗಳ ಬಳಿಕ ಸಾವು!
ಹೀಗಾಗಿ ಕುಟುಂಬಸ್ಥರು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿದ್ದಾರೆ. 21 ದಿನನಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೆರಿಗೆಯಾದ 28 ದಿನಗಳ ನಂತರ ರೇಷ್ಮಾ ಸಾವನ್ನಪ್ಪಿದ್ದಾರೆ. ಲಂಗ್ಸ್ ವೀಕ್, ಹಾರ್ಟ್ ವೀಕ್, ಕಿಡ್ನಿ ವೈಫಲ್ಯದಿಂದಾಗಿ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಕುಟುಂಬಸ್ಥರು ಇದೆಲ್ಲ ಸುಳ್ಳು, ವೈದ್ಯರ ನಿರ್ಲಕ್ಷ್ಯದಿಂದಾಗಿ ರೇಷ್ಮಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.