ಬೆಂಗಳೂರು: ಮೆಟ್ರೋ, ಬಸ್ ಟಿಕೆಟ್, ಪೆಟ್ರೋಲ್ ಬೆಲೆ ಏರಿಕೆಯ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಹೊರೆ ಬೀಳುವುದು ನಿಶ್ಚಿತವಾಗಿದೆ. ಬ್ಯಾಂಕ್ ಗಳ ಎಟಿಎಂಗಳಲ್ಲಿ ಹಣ ವಿತ್ ಡ್ರಾ (ATM withdrawals) ಮಾಡುವಾಗ ವಿಧಿಸುವ ಶುಲ್ಕವನ್ನು ಏರಿಕೆ ಮಾಡುವ ಪ್ರಸ್ತಾಪಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಸೂಚಿಸಿದೆ. ಹಾಗಾಗಿ, ಮೇ 1ರಿಂದ ಗ್ರಾಹಕರು ಮಾಡುವ ಪ್ರತಿಯೊಂದು ಟ್ರ್ಯಾನ್ಸಾಕ್ಷನ್ ಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿಸಿಐ) ಎಟಿಎಂ ವಿತ್ ಡ್ರಾ ಶುಲ್ಕವನ್ನು ಏರಿಕೆ ಮಾಡುವ ಪ್ರಸ್ತಾಪ ಸಲ್ಲಿಸಿದ್ದು, ಇದಕ್ಕೆ ಆರ್ ಬಿಐ ಈಗ ಅನುಮೋದನೆ ನೀಡಿದೆ. ಆದರೆ, ಇದುವರೆಗೆ ಬ್ಯಾಂಕುಗಳು ಗ್ರಾಹಕರಿಗೆ ಶುಲ್ಕವನ್ನು ಏರಿಕೆ ಮಾಡುವ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಖಂಡಿತವಾಗಿಯೂ ಗ್ರಾಹಕರ ಮೇಲೆಯೇ ಹೆಚ್ಚುವರಿ ಶುಲ್ಕವನ್ನು ಹೇರಲಾಗುತ್ತದೆ ಎಂದು ತಿಳಿದುಬಂದಿದೆ.
“ಕಳೆದ 10 ವರ್ಷಗಳಲ್ಲಿ ಯಾವಾಗೆಲ್ಲ ಇಂಟರ್ ಚೇಂಜ್ ಶುಲ್ಕವನ್ನು ಏರಿಸಲಾಗಿದೆಯೋ, ಆಗೆಲ್ಲ ಆ ಶುಲ್ಕವನ್ನು ಗ್ರಾಹಕರಿಗೇ ಹೊರಿಸಲಾಗಿದೆ. ಇದು ಕೂಡ ಬೇರೆ ರೀತಿ ಅಲ್ಲ. ಗ್ರಾಹಕರೇ ಹೆಚ್ಚುವರಿ ಶುಲ್ಕವನ್ನು ನೀಡಬೇಕು ಎಂಬುದಾಗಿ ಬ್ಯಾಂಕುಗಳು ಆದೇಶ ಹೊರಡಿಸುವ ಸಾಧ್ಯತೆ ಇದೆ” ಎಂದು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಷ್ಟು ಶುಲ್ಕ ಹೆಚ್ಚಳ?
ಉದ್ದೇಶ ಮೊದಲಿದ್ದ ದರ ಪರಿಷ್ಕೃತ ದರ
ಹಣ ವಿತ್ ಡ್ರಾ 17 ರೂಪಾಯಿ 19 ರೂಪಾಯಿ
ಬ್ಯಾಲೆನ್ಸ್ ಚೆಕ್ 6 ರೂಪಾಯಿ 7 ರೂಪಾಯಿ
ಗ್ರಾಹಕರು ಎಟಿಎಂಗಳ ಮೂಲಕ ಪ್ರತಿ ಬಾರಿಯೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಿಲ್ಲ. ಮಹಾನಗರಗಳಲ್ಲಿ ವಾಸಿಸುವ ಜನರು ಮಾಸಿಕ ಐದು ಬಾರಿ ಉಚಿತವಾಗಿ ಹಣ ಡ್ರಾ ಮಾಡಬಹುದಾಗಿದೆ. ಇನ್ನು, ಸಣ್ಣ ನಗರ, ಪಟ್ಟಣಗಳಲ್ಲಿ ಮೂರು ಬಾರಿ ಉಚಿತವಾಗಿ ಹಣ ಡ್ರಾ ಮಾಡಬಹುದಾಗಿದೆ. ಈ ಮಿತಿಯನ್ನು ಮೀರಿದರೆ ಮಾತ್ರ ಹೆಚ್ಚುವರಿ ಫೀ ಕಟ್ಟಬೇಕಾಗುತ್ತದೆ.