ಹಿರಿಯ ನಟಿ ಲೀಲಾವತಿ ಅವರ ಭವ್ಯ ಸ್ಮಾರಕ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಸದ್ಯದಲ್ಲಿಯೇ ಹಿರಿಯ ನಟಿಯ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ (Leelavathi) ಅವರು ಇಹಲೋಕ ತ್ಯಜಿಸಿದ್ದರು. ಆನಂತರ ಅವರ ತೋಟದ ಪಕ್ಕದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ನಟ ಹಾಗೂ ಲೀಲಾವತಿ ಅವರ ಮಗ ವಿನೋದ್ ರಾಜ್ ತಿಳಿಸಿದ್ದರು. ಅದರಂತೆ ಜ. 14ರಂದು ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆ ವೇಳೆ ವಿನೋದ್ ರಾಜ್, ಪತ್ನಿ ಅನು ಹಾಗೂ ಪುತ್ರ ಯುವರಾಜ್ ಫೂಜೆಯಲ್ಲಿ ಭಾಗವಹಿಸಿದ್ದರು. ಸರ್ಕಾರ ಕೂಡ ಸಹಾಯ ಮಾಡುವುದಾಗಿ ಘೋಷಣೆ ಮಾಡಿತ್ತು. 55 ಲಕ್ಷ ರೂಪಾಯಿ ವೆಚ್ಚದಲ್ಲಿ ಲೀಲಾವತಿ ಸ್ಮಾರಕ (Leelavathi Smaraka) ನಿರ್ಮಾಣ ಮಾಡಲು ವಿನೋದ್ ರಾಜ್ ಮುಂದಾಗಿದ್ದರು.

ಭೂಮಿ ಪೂಜೆ ನೆರವೇರಿಸಿದ್ದ ಸಂದರ್ಭದಲ್ಲಿ ಮಾತನಾಡಿದ್ದ ನಟ ವಿನೋದ್ ರಾಜ್, ತಾಯಿ ಅವರ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಅವರ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದವರೆಗೆ ಗ್ಯಾಲರಿಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ. ಅದನ್ನು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದಿದ್ದರು. ಹೀಗಾಗಿ ಈಗ ಸ್ಮಾರಕ ಕಾರ್ಯ ಭರದಿಂದ ನಡೆಯುತ್ತಿದೆ. ಸದ್ಯದಲ್ಲಿಯೇ ಸ್ಮಾರಕ ಭವನ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಬೆಳ್ತಂಗಡಿ ಮೂಲದ ಲೀಲಾವತಿ, ಓದಿದ್ದು 2ನೇ ತರಗತಿ ಮಾತ್ರ. ಅವರು 1958ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ‘ಮಾಂಗಲ್ಯ ಯೋಗ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿ ಲೀಲಾವತಿ, ಕನ್ನಡ, ತೆಲುಗು, ತಮಿಳು, ತುಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಬರೋಬ್ಬರಿ 650ಕ್ಕೂ ಚಿತ್ರಗಳಲ್ಲಿ ಅವರು ನಟಿಸಿದ್ದರು. ವಿನೋದ್ ರಾಜ್ ನಟನೆಯ ‘ಯಾರದು’ (2009) ಚಿತ್ರದ ನಂತರ ನಟನೆಯಿಂದ ಅವರು ದೂರ ಉಳಿದಿದ್ದರು. ಮಗನೊಂದಿಗೆ ಸೇರಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು.
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಇಹಲೋಕ ತ್ಯಜಿಸಿದ್ದರು. ಅವರ ಸಾವಿಗೆ ಇಡೀ ಕರುನಾಡು ಕಣ್ಣೀರು ಸುರಿಸಿತ್ತು.