ಬೆಳಗಾವಿ: ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಮಧ್ಯೆ ನಡೆದ ಜಟಾಪಟಿ ದೊಡ್ಡ ವಿಕೋಪಕ್ಕೆ ತೆರಳಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ಸಿ.ಟಿ. ರವಿ ತಮ್ಮ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಅಲ್ಲದೇ, ರವಿ ಕೂಡ ಕೊಲೆಗೆ ಯತ್ನಿಸಲಾಗಿದೆ ಎಂದು ಪ್ರತಿ ದೂರು ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಟಿ ರವಿ ತಮ್ಮ ಕಡೆಗೆ ನುಗ್ಗಿ ಬಂದು 10 ಬಾರಿ ಅಶ್ಲೀಲ ಪದ ಬಳಸಿದ್ದಾರೆ. ಅಶ್ಲೀಲವಾಗಿ ಸನ್ನೆ ಕೂಡ ಮಾಡಿ, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬೆನ್ನಲ್ಲೇ ಸುವರ್ಣಸೌಧದಲ್ಲಿ ಧರಣಿ ಕುಳಿತಿದ್ದ ಸಿಟಿ ರವಿಯನ್ನು ಹೀರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಹೀರೇಬಾಗೇವಾಡಿ ಠಾಣೆಯಲ್ಲಿ ಕೆಲಹೊತ್ತು ಕೂರಿಸಿ ನಂತರ ನಂದಗಢ ಠಾಣೆಗೆ ಕರೆದೊಯ್ದಿದ್ದರು. ಮತ್ತೆ ಅಲ್ಲಿಂದ ಖಾನಾಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದ್ದರು. ಖಾನಾಪುರ ಠಾಣೆಯಲ್ಲಿ ಸಿಟಿ ರವಿ ಬಂಧಿಸಿಡಲಾಗಿತ್ತು. ಠಾಣೆ ಮುಂದೆ ಬಿಜೆಪಿ ಎಂಎಲ್ಸಿ ರವಿಕುಮಾರ್, ಸುಭಾಷ್ ಪಾಟೀಲ್, ಸಂಜಯ್ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮತ್ತಿತ್ತತರು ಪ್ರತಿಭಟನೆ ನಡೆಸಿದರು. ಡಿಸಿಎಂ ಮತ್ತು ಗೃಹ ಸಚಿವರ ಸೂಚನೆಯಂತೆ ಪೊಲೀಸ್ ಕಮಿಷನರ್ ವರ್ತಿಸುತ್ತಿದ್ದಾರೆ. ಸಿಟಿ ರವಿ ತಲೆಗೆ ರಕ್ತ ಬರುವಂತೆ ಏಟು ಬಿದ್ದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆದ್ದಾರೆ.
ಖಾನಾಪುರ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಕೂಡ ಪ್ರತಿದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಸಿಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಆಗಲೂ ಅಲ್ಲಿ ಹೈಡ್ರಾಮಾನೇ ನಡೆಯಿತು. ನಂತರ ಬಿಗಿ ಭದ್ರತೆಯೊಂದಿಗೆ ಸಿ.ಟಿ. ರವಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು.