ಬೆಂಗಳೂರು: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಪ್ರಕರಣ ಎನ್ಐಎ ತನಿಖೆಗೆ ಕೊಡುವಂತೆ ಒತ್ತಾಯಿಸಿ ನಾಳೆ (ಸೆ.1) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಧರ್ಮಸ್ಥಳ ಚಲೋ ಹಾಗೂ ಧರ್ಮಜಾಗೃತಿ ಸಮಾವೇಶಕ್ಕೆ ಬಿಜೆಪಿ ಮುಂದಾಗಿದೆ.
ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವುದು, ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶ.
ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸಲಿದ್ದು, ನಾಳೆ ಬೆಳಗ್ಗೆ ಆಯಾಯಾ ಕ್ಷೇತ್ರಗಳಿಂದಲೇ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಬರಲು ಸೂಚಿಸಲಾಗಿದೆ.
ನಾಳೆ ಬಿಜೆಪಿ ನಾಯಕರು ಮೊದಲು ಮಂಜುನಾಥನ ದರ್ಶನ ಹಾಗೂ ವೀರೇಂದ್ರ ಹೆಗ್ಗಡೆ ಭೇಟಿ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಕ್ಕೆ ಧರ್ಮಸ್ಥಳದಲ್ಲಿ ಬೃಹತ್ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ. ಧರ್ಮಸ್ಥಳ ವಿರುದ್ದ ಪಿತೂರಿ, ಸಂಚು ನಡೆಯುತ್ತಿದೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು. ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುತ್ತದೆ.
ಈ ಸಮಾವೇಶದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.


















