ನವದೆಹಲಿ: ವಿಶ್ವ ಪ್ರಸಿದ್ಧ ವನ್ಯಜೀವಿ ಸಂರಕ್ಷಣಾವಾದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪ್ರಾಜೆಕ್ಟ್ ಚೀತಾದ ಪ್ರಮುಖ ಸದಸ್ಯರಾಗಿದ್ದ ವಿನ್ಸೆಂಟ್ ವಾನ್ ಡೆರ್ ಮೆರ್ವೆ ಅವರು ಸೌದಿ ಅರೇಬಿಯಾದ ರಿಯಾದ್‌ನ ತಮ್ಮ ಅಪಾರ್ಟ್ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಅಕಾಲಿಕ ಸಾವು ಪರಿಸರ ಸಂರಕ್ಷಣಾ ಸಮುದಾಯದಲ್ಲಿ ಅಚ್ಚರಿ ಹಾಗೂ ಆಘಾತ ಮೂಡಿಸಿದೆ.
ಆಫ್ರಿಕಾದ ಚೀತಾಗಳನ್ನು ಭಾರತದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪರಿಚಯಿಸುವಲ್ಲಿ 42 ವರ್ಷದ ವಿನ್ಸೆಂಟ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಅವರ ಮೃತದೇಹವು ಅವರ ಅಪಾರ್ಟ್‌ಮೆಂಟ್‌ನ ಹಾಲ್‌ನಲ್ಲಿ ಪತ್ತೆಯಾಗಿದೆ. ತಲೆಗೆ ಗಾಯವಾಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸಾವಿನಲ್ಲಿ ಯಾವುದೇ ಅನುಮಾನ ಕಂಡುಬರುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವಿನ್ಸೆಂಟ್ ಅವರ ಕುಟುಂಬವು, ಇದು ಆಕಸ್ಮಿಕವಾಗಿರಲು ಸಾಧ್ಯವೇ ಇಲ್ಲ ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದೆ.
ಮೆಟಾಪಾಪ್ಯುಲೇಷನ್ ಇನಿಶಿಯೇಟಿವ್ (ಟಿಎಂಐ) ಎಂಬ ಸಂಸ್ಥೆ ಸ್ಥಾಪಕರಾಗಿದ್ದ, ವ್ಯಾನ್ ಡೆರ್ ಮೆರ್ವೆ ಅವರು ಏಷ್ಯಾದಾದ್ಯಂತ ಮಾತ್ರವಲ್ಲದೆ ಆಫ್ರಿಕಾದಲ್ಲಿಯೂ ತಮ್ಮ ಕೆಲಸಗಳಿಂದ ಖ್ಯಾತಿ ಗಳಿಸಿದ್ದರು.
ಇತ್ತೀಚೆಗೆ, ಅವರ ಸಂಸ್ಥೆಯು ಸೌದಿ ಅರೇಬಿಯಾದಲ್ಲೂ ಚೀತಾಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುವ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಈ ಯೋಜನೆಯಲ್ಲಿ ಕೆಲಸ ಮಾಡುತ್ತಿತ್ತು. ಅದಕ್ಕಾಗಿಯೇ ಅವರು ರಿಯಾದ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಅವರು ಶವವಾಗಿ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಾಜೆಕ್ಟ್ ಚೀತಾದಲ್ಲಿ ನೇರವಾಗಿ ಭಾಗಿಯಾಗಿರುವ ಆಯ್ದ ಚೀತಾ ತಜ್ಞರಲ್ಲಿ ವ್ಯಾನ್ ಡೆರ್ ಮೆರ್ವೆ ಕೂಡ ಒಬ್ಬರು. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾದ ಚೀತಾಗಳು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ಅವರು ಹೊಂದಿದ್ದರು. ಆಫ್ರಿಕನ್ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮರು ಪರಿಚಯಿಸುವಲ್ಲಿ ಎದುರಾದ ಸವಾಲುಗಳು ಮತ್ತು ಕಾನೂನು ಅಡೆತಡೆಗಳ ಹೊರತಾಗಿಯೂ, ಅವರು ಈ ಯೋಜನೆಯಲ್ಲಿ ಬಲವಾದ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.