ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಭಾಗ್ಯವನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರಿದೆ. ಇದು ಕೂಡ ಕಾಂಗ್ರೆಸ್ ನ ಭಾಗ್ಯಗಳಲ್ಲಿ ಒಂದು. ಇದು ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ 6ನೇ ಗ್ಯಾರಂಟಿ “ಗೂಂಡಾ ಭಾಗ್ಯ” ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಬಡವರಿಗೆ ಬ್ಯಾಂಕ್ ಗಳು ಸಾಲ ನೀಡದ ಕಾರಣ, ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಅವಲಂಬಿಸುವಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಂತಾಗಿದೆ. ಹೀಗಾಗಿ ಮೀಟರ್ ಬಡ್ಡಿ ಮಾಫಿಯಾ ತಲೆ ಎತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 14 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಬಡವರು ಸಣ್ಣ ಸಾಲ ಮಾಡಿದರೂ ಉಳಿಗಾಲ ಇಲ್ಲ ಅನಿಸುತ್ತಿದೆ. ಅಧಿಕಾರಿಗಳ ಆತ್ಮಹತ್ಯೆ ಸೀರಿಯಲ್ ಸಹ ನೋಡಿದ್ದೇವೆ. ಬಾಣಂತಿಯರ ಸರಣಿ ಸಾವು ನೋಡಿದ್ದೇವೆ. ಈಗ ಮೈಕ್ರೋ ಫೈನಾನ್ಸ್ ಸೀರಿಯಲ್ ಆರಂಭ ಆಗಿದೆ. ಮೈಕ್ರೋ ಫೈನಾನ್ಸ್ ಅಟ್ಟಹಾಸ ಮೆರೆಯಿತ್ತಿದೆ. ಅಂಬೇಡ್ಕರ್, ವಾಲ್ಮೀಕಿ, ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡುತ್ತಿದ್ದರು. ಈಗ ಅಭಿವೃದ್ಧಿ ನಿಗಮದಲ್ಲಿ ಸಿಗುವ ಸಾಲ ನಿಂತು ಹೋಗಿದೆ. ಹೀಗಾಗಿ ವಿಧಿ ಇಲ್ಲದೆ ಸಣ್ಣಪುಟ್ಟ ಸಾಲದ ಮೊರೆ ಹೋಗುತ್ತಿದ್ದೇವೆ ಅಂತ ಜನರು ನನಗೆ ಹೇಳಿದ್ದಾರೆ. ಆದರೆ, ಅವರು ಸರ್ಕಾರದ ಹತಾಶೆಯನ್ನು ಬಂಡವಾಳ ಮಾಡಿಕೊಂಡು ಜನರನ್ನು ಶೋಷಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ನಾಯಿ ಕೊಡೆ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ತಲೆ ಎತ್ತುತ್ತಿವೆ. 50 ಸಾವಿರ ರೂ. ಸಾಲಕ್ಕೆ 46 ಸಾವಿರ ರೂ. ಕೊಡುತ್ತಾರೆ. ಸರ್ವಿಸ್ ಚಾರ್ಜ್ ಅಂತ 4 ಸಾವಿರ ರೂ. ಕಟ್ ಮಾಡಿಕೊಳ್ಳುತ್ತಾರೆ. ಸಾಲ ಪಡೆದ 10 ಜನರಲ್ಲಿ ಯಾರಾದರೂ ಒಬ್ಬರು ಹಣ ಕಟ್ಟಿಲ್ಲ ಅಂದರೆ, 9 ಜನರು ಸೇರಿ ಕಟ್ಟಬೇಕು. ಹಣ ಕಟ್ಟಿಲ್ಲ ಅಂದರೆ ಮನೆಗೆ ಹೋಗುತ್ತಾರೆ. ಮೂರು ತಿಂಗಳು ಹಣ ಕಟ್ಟಿಲ್ಲ ಅಂದರೆ, ರೌಡಿಗಳನ್ನು ಬಿಡುತ್ತಾರೆ. ಹೀಗಾಗಿ ಜನರು ರೌಡಿಗಳಿಗೆ ಹೆದರಿ ಊರು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಫೈನಾನ್ಸ್ ನವರು ಜನರ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ಕೋರ್ಟ್ ನಿಂದ ಆರ್ಡರ್ ಬರಬೇಕು, ಬಂದಿಲ್ಲ. ಪೊಲೀಸರು ಇದರ ಮೇಲೆ ಕೇಸ್ ಹಾಕಬಹುದಿತ್ತು. ಈ ವಸೂಲಿಗೆ ಪೊಲೀಸರು ಸಹ ಸಹಕಾರ ಕೊಡುತ್ತಾರೆ ಎಂದು ಜನರು ಆರೋಪಿಸಿದ್ದಾರೆ. ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಗೆ ಪೋನ್ ಮಾಡಿ ಅಂತ ಸಿಎಂ ಹೇಳುತ್ತಾರೆ. ಪೋನ್ ಮಾಡಿದರೆ ಯಾರೂ ಸಹಾಯ ಮಾಡುತ್ತಿಲ್ಲ. ಹಾಗಾದರೆ ಕಂಟ್ರೋಲ್ ರೂಮ್ ಯಾಕೆ ಬೇಕು? ಎಂದು ಗುಡುಗಿದ್ದಾರೆ.
ಸರ್ಕಾರದಿಂದ 1,555 ಕೋಟಿ ಲೋನ್ ಜನರಿಗೆ ಮುಟ್ಟಬೇಕಿತ್ತು. ಆದರೆ, ಮುಟ್ಟಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಮೈಕ್ರೋ ಫೈನಾನ್ಸ್ ಜನರಿಗೆ ಸಾಲ ಕೊಡುವ ನೆಪದಲ್ಲಿ ಮೋಸ ಮಾಡುತ್ತಿವೆ. ಈ ಸರ್ಕಾರದಲ್ಲಿ ಯಾವುದೇ ನಿಗಮದಿಂದ ಲೋನ್ ಸಿಗುತ್ತಿಲ್ಲ. ಹೀಗಾಗಿಯೇ ಜನರು ಮೈಕ್ರೋ ಫೈನಾನ್ಸ್ ಮೂಲಕ ಲೋನ್ ಪಡೆದು ಮೋಸ ಹೋಗುತ್ತಿದ್ದಾರೆ. ಸರ್ಕಾರದಿಂದ ಎಲ್ಲ ಇಲಾಖೆಗೆ ಹೋಗಬೇಕಾದ ಅನುದಾನ ಕಡಿತವಾಗಿದೆ. ಸಿಎಂ ಸಾಲ ಮನ್ನಾ ಮಾಡುತ್ತೇವೆ ಅಂತಾ ಹೇಳಿದ್ದರು. ಆದರೆ, ಜನರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಮಾತ್ರ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಗುಡುಗಿದ್ದಾರೆ.