ಉಡುಪಿ : ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಂದಾಪುರದ ಕೋಟೇಶ್ವರ ಸಮೀಪದ ಯುವ ಮೆರಿಡಿಯನ್ ಹೆಲಿಪ್ಯಾಡ್ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷದ ಕಡೆಗೆ ಮತದಾರರ ಒಲವಿರುತ್ತದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿವೆ. ಅಭಿವೃದ್ಧಿಯ ಜೊತೆಗೆ ಜನರ ಆದಾಯ ಕೂಡ ಜಾಸ್ತಿ ಆಗಿದೆ. ಅದರಲ್ಲೂ ಮಹಿಳಾ ಮತದಾರರು ಸಂತೋಷದಲ್ಲಿದ್ದಾರೆ ಎಂದಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕಿದೆ. ಗೆಲುವೊಂದೇ ನಮಗೆ ಮಾನದಂಡ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : ಪತ್ನಿಯ ಕತ್ತು ಕೊಯ್ದು, ಶವದ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದ ಪಾಪಿ ಪತಿ



















