ಹಾವೇರಿ: ಚುನಾವಣೆಯ ಮುಂಚೆ ಮಹಿಳೆಯರ ಅಕೌಂಟ್ ಗೆ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂ. ಹಾಕಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಚುನಾವಣಾ ಆಯೋಗ ತಕ್ಷಣ ತಡೆ ಹಿಡಿಯಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚುನಾವಣೆ ಪಾರದರ್ಶಕವಾಗಿರಬೇಕು. ರಾಜ್ಯ ಸರ್ಕಾರ ಪ್ರತಿ ಬಾರಿಯೂ ಚುನಾವಣೆಗೆ ಮುನ್ನ ಸರ್ಕಾರದ ಹಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಆದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಅನಿಸುತ್ತಿದೆ. ಹಾವೇರಿ ಜಿಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗುಡುಗಿದ್ದಾರೆ.
ಚುನಾವಣೆಗೆ ಸರ್ಕಾರದ ಹಣ ಬಳಕೆಯಾಗುತ್ತಿರುವುದು ಸ್ಪಷ್ಟ. ಸಿಎಂ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವ, ಸಂವಿಧಾನದ ಬಹಳ ಬಗ್ಗೆ ಮಾತನಾಡುತ್ತಾರೆ. ಇಡೀ ಸರ್ಕಾರವೇ ಸರ್ಕಾರಿ ದುಡ್ಡಿನಲ್ಲಿ ರಾಜಕೀಯ ಭ್ರಷ್ಟಾಚಾರ ಮಾಡುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ರೌಡಿಶೀಟರ್ ಇರುವ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಅಷ್ಟೊಂದು ಪ್ರಕರಣಗಳು ಇದ್ದವು. ಪ್ರಕರಣಗಳು ಮುಕ್ತಾಯವಾಗಲು ಏನೆಲ್ಲ ನಿಯಮ ಇದೆ ಎಂದು ಎಸ್ಪಿಯವರು ಪೊಲಿಸ್ ಮ್ಯಾನುವಲ್ ಏನು ಅಂತ ಅವರೇ ಹೇಳಿದರು. ಈಗ ಯಾವುದೇ ಪ್ರಕರಣ ಇಲ್ಲ ಎಂದು ಸರ್ಕಾರವೇ ಹೇಳಿಸಿದೆ ಎಂದು ಆರೋಪಿಸಿದ್ದಾರೆ.