ಬೆಂಗಳೂರು: ಬಿಜೆಪಿ (bjp) ಸರ್ಕಾರದ ಸಂದರ್ಭದಲ್ಲಿ ಕೊವಿಡ್ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿತ್ತು. ಆದರೆ, ಆ ವೇಳೆ ದೊಡ್ಡ ಹಗರಣವೇ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿತ್ತು. ಈಗ ಆ ಆರೋಪದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಸ್ಟೀಸ್ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ.
ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ವಿರುದ್ಧ ಅಕ್ರಮ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೊವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ಖರೀದಿ ಸೇರಿದಂತೆ ಅಕ್ರಮ ನಡೆದ ಆರೋಪದ ಕುರಿತ ವರದಿಯನ್ನು ಆಯೋಗ ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ಈ ತನಿಖಾ ಆಯೋಗವನ್ನು ಆಗಸ್ಟ್ 25, 2023ರಲ್ಲಿ ರಚಿಸಲಾಗಿತ್ತು. ಆಯೋಗದಿಂದ ಬಿಬಿಎಂಪಿ ವಿವಿಧ ವಲಯಗಳು ಹಾಗೂ ಇಲಾಖಾವಾರು ಭರಿಸಿರುವ ವೆಚ್ಚದ ಮಾಹಿತಿ ಉಲ್ಲೇಖಿಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾರವರ ನೇತೃತ್ವದ ತನಿಖಾ ಆಯೋಗದವರು ತನಿಖಾ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಗರಣದ ಬಗ್ಗೆ ಈಗ ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಈ ಹಗರಣ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುವುದನ್ನು ಈಗ ಕಾಯ್ದು ನೋಡಬೇಕಿದೆ.