ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅವುಗಳ ಮಿತ್ರ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈಗಾಗಲೇ ಇಂದು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈಗ ಕಾಂಗ್ರೆಸ್ ಸೇರಿದಂತೆ ಅದರ ಮೈತ್ರಿ ಮಹಾ ವಿಕಾಸ್ ಅಘಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಪಾಲಿಗೆ ಮಹಾರಾಷ್ಟ್ರ ಚುನಾಣೆ ಬಹುಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ತಂದರೆ ಮಾತ್ರ ಇಲ್ಲಿ ಸ್ಥಿರ, ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತು ಉದ್ಯೋಗ, ನಗರಾಭಿವೃದ್ಧಿ, ಪರಿಸರ ಮತ್ತು ಸಾರ್ವಜನಿಕ ಕಲ್ಯಾಣವನ್ನು ಆಧರಿಸಿದ ಮಹಾರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ನಮ್ಮಲ್ಲಿ ಐದು ಆಧಾರ ಸ್ತಂಭಗಳಿವೆ ಎಂದಿದ್ದಾರೆ.
ಐದು ಗ್ಯಾರಂಟಿಗಳನ್ನು ಮಹಾ ಅಘಾಡಿ ಘೋಷಿಸಿದೆ. ಮೊದಲ ಗ್ಯಾರಂಟಿ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 3 ಸಾವಿರ ರೂ, ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಸೇವೆ, ಕುಟುಂಬ ರಕ್ಷಾ ಯೋಜನೆ ಮೂರನೇ ಗ್ಯಾರಂಟಿಯಾಗಿದ್ದು, 25 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧಿಗಳನ್ನು ನೀಡಲಾಗುತ್ತದೆ. ಕೃಷಿ ಸಮೃದ್ಧಿ ಯೋಜನೆಯಡಿ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ 3 ಲಕ್ಷ ರೂ.ವರೆಗಿನ ಸಾಲ ಮನ್ನಾ ಹಾಗೂ 50 ಸಾವಿರ ಪ್ರೋತ್ಸಾಹ ಧನ ನೀಡುವ ಭರವಸೆ, ನಿರುದ್ಯೋಗಿಗಳಿಗೆ ಮಾಸಿಕ 4000 ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಮಹಾವಿಕಾಸ್ ಅಘಾಡಿಯು ತನ್ನ ಪ್ರಣಾಳಿಕೆಯನ್ನು ‘ಮಹಾರಾಷ್ಟ್ರ ನಾಮ’ ಎಂದು ಹೆಸರಿಸಿದೆ. ಈ ಸಂದರ್ಭದಲ್ಲಿ ಶಿವಸೇನೆ ಯುಬಿಟಿ ನಾಯಕ ಸಂಜಯ್ ರಾವತ್, ಎನ್ ಸಿಪಿ ಎಸ್ ಪಿ ನಾಯಕಿ ಸುಪ್ರಿಯಾ ಸುಳೆ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸೇರಿದಂತೆ ಹಲವರು ಇದ್ದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.